ಸ್ತ್ರೀಶಕ್ತಿ ಗುಂಪುಗಳಿಗೆ ಮನೆ-ಮನೆ ಕಸ ಸಂಗ್ರಹಿಸಲು ಅವಕಾಶ ನೀಡಲು ಒತ್ತಾಯ

Update: 2019-02-16 17:49 GMT

ಬೆಂಗಳೂರು, ಫೆ. 16: ರಾಜರಾಜೇಶ್ವರಿ ನಗರ, ಮಹದೇವಪುರ, ಕೆ.ಆರ್.ಪುರ ಹಾಗೂ ದಾಸರಹಳ್ಳಿ ವಲಯಗಳಲ್ಲಿ ಸ್ತ್ರೀಶಕ್ತಿ ಗುಂಪುಗಳಿಗೆ ಮನೆ-ಮನೆ ಕಸ ಸಂಗ್ರಹಿಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಬಿಡುಗಡೆ ಚಿರತೆಗಳು(ವಿಸಿಕೆ) ಸಂಘಟನೆಯಿಂದ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಧರಣಿಯ ನೇತೃತ್ವ ವಹಿಸಿದ್ದ ವಿಸಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಮೂರ್ತಿ ಮಾತನಾಡಿ, ನಗರದ ನಾಲ್ಕು ವಲಯಗಳಲ್ಲಿ ಸುಮಾರು 2ಸಾವಿರಕ್ಕೂ ಅಧಿಕ ಮಹಿಳೆಯರು ಘನತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದು, ತ್ಯಾಜ್ಯ ವಿಲೇವಾರಿಯ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಇವರೆಲ್ಲರೂ ಆರ್ಥಿಕವಾಗಿ ದುರ್ಬಲರು, ವಿಧವೆಯರು, ದಲಿತ, ಹಿಂದುಳಿದ ಮಹಿಳೆಯರಾಗಿದ್ದಾರೆಂದು ಹೇಳಿದರು.

ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಈ ಮಹಿಳೆಯರಿಗೆ ತ್ಯಾಜ್ಯ ಸಂಗ್ರಹಿಸಲು ಅವಕಾಶ ಕಲ್ಪಿಸುವ ಭರವಸೆಯಿಂದ ಈ ಮಹಿಳೆಯರು ಸ್ವಂತ ವಾಹನಗಳನ್ನು ಖರೀದಿಸಿದ್ದಾರೆ. ಆದರೆ, ಬಿಬಿಎಂಪಿ ಗುತ್ತಿಗೆದಾರರಿಗೆ ಈ ಕೆಲಸವನ್ನು ವಹಿಸಿದ್ದು, ಇದರಿಂದ ಮಹಿಳೆಯರು ಬೀದಿಪಾಲಾಗುತ್ತಿದ್ದಾರೆ.

ಆದುದರಿಂದ ಬಿಬಿಎಂಪಿ ಸ್ತ್ರೀಶಕ್ತಿ ಮಹಿಳಾ ಗುಂಪುಗಳಿಗೆ ಘನತ್ಯಾಜ್ಯ ಸಂಗ್ರಹಿಸಲು ಅವಕಾಶ ನೀಡಬೇಕು. ಅಲ್ಲದೆ, ಮಹಿಳೆಯರಿಗೆ ಬಿಬಿಎಂಪಿ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಬಡ ಮಹಿಳೆಯರಿಗೆ ಉದ್ಯೋಗ ಕಲ್ಪಿಸಬೇಕೆಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News