ವೇದಾಂಗ ಜೋತಿಷ್ಯವನ್ನು ತಿರಸ್ಕರಿಸಿದ ಬ್ರಹ್ಮಗುಪ್ತ

Update: 2019-02-17 04:44 GMT

ಪರಿಣತ ಗಣಿತ ತಜ್ಞ ಹಾಗೂ ಖಗೋಳ ಶಾಸ್ತ್ರಜ್ಞನಾದ ಬ್ರಹ್ಮಗುಪ್ತನು (ಜನ್ಮ ಕ್ರಿ.ಶ.598), ಗುಜರಾತ್‌ನ ಚಾಪರಾಜವಂಶದ ರಾಜಾ ವ್ಯಾಘ್ರಮುಖನ ಆಳ್ವಿಕೆಯ ಕಾಲದಲ್ಲಿ ಆಗಿ ಹೋದವನು. ಅಲ್-ಬೈರೂನಿ ಭಾರತಕ್ಕೆ ಬರುವುದಕ್ಕಿಂತ ಮುಂಚೆಯೇ ಬ್ರಹ್ಮಗುಪ್ತನ ಕೃತಿಯೊಂದಿಗೆ ಅದರ ಅರೇಬಿಕ್ ಭಾಷಾಂತರದ ಮೂಲಕ ಪರಿಚಿತನಾಗಿದ್ದನು ಮತ್ತು ಬ್ರಹ್ಮಗುಪ್ತನು ‘ಭಿಲ್ಲಮಾಲ’ ಎಂಬ ಸ್ಥಳದವನು ಎಂದು ಅವನು ಹೇಳಿದ್ದಾನೆ (‘ಭಿಲ್ಲಮಾಲ’ವು ಇಂದಿನ ಉತ್ತರ ಗುಜರಾತ್‌ನ ಭಿನ್ಮಾಲ್ ಅಥವಾ ಶ್ರೀಮಾಲ ಎಂದು ಗುರುತಿಸಲಾಗಿದೆ). ಬ್ರಹ್ಮಗುಪ್ತನ ಖಗೋಳಶಾಸ್ತ್ರ ಗ್ರಂಥಕ್ಕೆ ರಚಿಸಿದ ‘ವರುಣ’ನು ಅವನನ್ನು ‘ಭಿಲ್ಲಮಾಲಕಾಚಾರ್ಯ’ ಎಂದು ಸಂಬೋಧಿಸುತ್ತಾನೆ. ಬ್ರಹ್ಮಗುಪ್ತನ ಕುರಿತು ಅವನ ಜೀವನಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ವಿವರಗಳು ಯಾವುವೂ ಲಭ್ಯವಿಲ್ಲ.

ಬ್ರಹ್ಮಗುಪ್ತನು ಎರಡು ಗ್ರಂಥಗಳನ್ನು ರಚಿಸಿದನು. ಒಂದು, ‘ಬ್ರಹ್ಮಸ್ಫುಟ ಸಿದ್ಧಾಂತ’, ಅವನೇ ಹೇಳಿದಂತೆ ಶಕ 550ರಲ್ಲಿ (ಅಥವಾ ಕ್ರಿ.ಶ.628) ರಚಿಸಿದುದು ಮತ್ತು ಎರಡನೆಯದು, ‘ಖಂಡ ಖಾದ್ಯಕ’, ಶಕ 587ರಲ್ಲಿ (ಅಥವಾ ಕ್ರಿ.ಶ.665). ಇದೊಂದು ‘ಕರಣ ಗ್ರಂಥ’. ಅವನ ವಯಸ್ಸು ಆಗ ಅರವತ್ತೇಳು. ‘ಬ್ರಹಸ್ಫುಟ ಸಿದ್ಧಾಂತ’ವು 1008 ಶ್ಲೋಕಗಳ್ಳುಳ (ಕೊನೆಯ ಅಧ್ಯಾಯದಲ್ಲಿ ಸಾಮಾನ್ಯ ವಿಷಯಗಳನ್ನು ಕುರಿತವುಗಳನ್ನು ಸೇರಿಸಿದರೆ 1022 ಶ್ಲೋಕಗಳ್ಳುಳ ಬೃಹದ್‌ಗ್ರಂಥ. ಇದು ಇಪ್ಪತ್ತನಾಲ್ಕು ಅಧ್ಯಾಯಗಳಲ್ಲಿ ವಿಭಾಗಿಸಲ್ಪಟ್ಟಿದೆ. ಇದರ ವಿಷಯ ವ್ಯಾಪ್ತಿಯೂ ದೊಡ್ಡದು. ಗ್ರಹಗಳ ಸರಾಸರಿ ಗತಿ. ಅವುಗಳ ಸ್ಫುಟಸ್ಥಾನ, ದಿಕ್ಕು, ಕಾಲ ಮತ್ತು ದೇಶಗಳ ಮೂರು ಸಮಸ್ಯೆಗಳು, ಸೂರ್ಯ ಮತ್ತು ಚಂದ್ರರ ಗ್ರಹಣಗಳು, ಗ್ರಹಣಗಳಲ್ಲಿ ಸೂರ್ಯೋದಯ ಸೂರ್ಯಾಸ್ತಗಳು, ಚಂದ್ರನ ಕೋಡು (cusp) ಮತ್ತು ನೆರಳು, ನಕ್ಷತ್ರಗಳ ಮತ್ತು ಗ್ರಹಗಳ ಯೋಗ (ಒಂದೆಡೆ ಸೇರುವುದು, ಖಗೋಳಶಾಸ್ತ್ರದ ಉಪಕರಣ (ಯಂತ್ರ)ಗಳು, ಮತ್ತು ಇನ್ನಿತರ ಸಂಬಂಧಿತ ವಿಷಯಗಳನ್ನು ಅದು ಒಳಗೊಂಡಿದೆ. ಹನ್ನೆರಡನೆಯ ಮತ್ತು ಹದಿನೆಂಟನೆಯ ಅಧ್ಯಾಯಗಳು ಗಣಿತ ಸಂಬಂಧಿತವಾದವುಗಳು (ಈ ಗ್ರಂಥದ ಗಣಿತ ಕುರಿತ ಅಧ್ಯಾಯ ನೋಡಿರಿ). ಪ್ರತಿಯೊಂದು ಅಧ್ಯಾಯದ ಕೆಳಗೆ ಶ್ಲೋಕಗಳ ಸಂಖ್ಯೆಯನ್ನು ಕರ್ತೃವು ಕೊಟ್ಟಿರುವುದು ಕುತೂಹಲಕರವಾಗಿದೆ. ಬ್ರಹ್ಮಗುಪ್ತನು ಚರ್ಚಿಸಿದ ಖಗೋಳಶಾಸ್ತ್ರೀಯ ವಿಷಯ ಭಾಗಗಳು ಅವನ ವೌಲಿಕತೆ, ವಿಮರ್ಶಾತ್ಮಕ ಧೋರಣೆಗಳನ್ನು ಪ್ರಕಟಪಡಿಸುತ್ತವೆ. ಗಣಿತ ಶಾಸ್ತ್ರದಲ್ಲಿ ಅವನಿಗಿರುವ ಪರಿಣತಿಯೂ ಅದನ್ನು ದೃಢೀಕರಿಸುತ್ತದೆ.

ವೇದಾಂಗ ಜ್ಯೋತಿಷ್ಯದ ‘ನಾಲ್ಕು ವರ್ಷಗಳ ಯುಗ’ವನ್ನು ಬ್ರಹ್ಮಗುಪ್ತ ತಿರಸ್ಕರಿಸಿದನು. ಜೈನರ ಎರಡು ಸೂರ್ಯರು - ಎರಡು ಚಂದ್ರರು ಎಂಬ ಕಲ್ಪನೆಯನ್ನು ಅವನು ಅಲ್ಲಗಳೆದನು. ಭಾರತೀಯ ಖಗೋಳಶಾಸ್ತ್ರದಲ್ಲಿ ಬಂದು ಸೇರಿರಬಹುದಾದ ಗ್ರಹಗಳ ಸ್ಥಾನ ನಿರ್ಧರಿಸುವ ಗ್ರೀಕ್ ವಿಧಾನವನ್ನು ಅವನು ಟೀಕಿಸಿದನು. ಒಂದನೆಯ ಆರ್ಯಭಟ ಪ್ರತಿಪಾದಿಸಿದ ಪೃಥ್ವಿಯ ಪರಿಭ್ರಮಣೆಯ ಸಿದ್ಧಾಂತವನ್ನು ಅವನು ಮೊಂಡುತನದಿಂದಲೇ ವಿರೋಧಿಸಿ, ಕೆಲವು ಪ್ರಶ್ನೆಗಳನ್ನು ಮುಂದಿಟ್ಟನು. ‘‘ಪೃಥ್ವಿಯು ಒಂದು ‘ಪ್ರಾಣ’ ಸಮಯದಲ್ಲಿ (ಸುಮಾರು ನಾಲ್ಕು ಸೆಕೆಂಡುಗಳು ಆರ್ಯಭಟ ಹೇಳಿದಂತೆ) ಒಂದು ‘ಕಲೆ’ (1)ಯಷ್ಟು ತನ್ನ ಸುತ್ತ ತಿರುಗುತ್ತಿದೆಯೆಂದಾದರೆ, ಪಕ್ಷಿಗಳು ಇರುವುದು ಹೇಗೆ ಮತ್ತು ಎಲ್ಲಿ? ಸುತ್ತ ತಿರುಗುತ್ತಿರುವ ಪೃಥ್ವಿಯಲ್ಲಿ, ಬಿಟ್ಟ ಬಾಣವು ಅದೇ ಸ್ಥಳಕ್ಕೆ ಹೋಗಿ ಬೀಳುವುದು ಹೇಗೆ?’’ ಎಂಬುದು ಅವನ ಪ್ರಶ್ನೆ. ಗಣಿತದಲ್ಲಿ ಮತ್ತು ಗಣನೆ ಮಾಡುವ ತಂತ್ರಗಳಲ್ಲಿ ಅವನು ಪರಿಣಿತನಾಗಿದ್ದುದರ ಹೊರತಾಗಿಯೂ ಬ್ರಹ್ಮಗುಪ್ತನು ಗ್ರಹಣಗಳು ಘಟಿಸುವುದನ್ನು ವಿವರಿಸುವಲ್ಲಿ ಪೌರಾಣಿಕ ‘ರಾಹು’ವನ್ನು ಕಲ್ಪಿಸಿಕೊಳ್ಳುವತ್ತ ಒಲವು ತೋರುತ್ತಾನೆ. ಅವನು ಆರ್ಯಭಟನ ವಿಷಯದಲ್ಲಿ ಅನುಕೂಲಕರ ಮನಸ್ಕತೆಯುಳ್ಳವನಾಗಿರಲಿಲ್ಲ. ಅಷ್ಟೇ ಅಲ್ಲ, ಅವನನ್ನು ಕಟುವಾಗಿ ಟೀಕಿಸಿದನು ಕೂಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News