ಮುರುಗಮ್ಮನ ನೆನಪು

Update: 2019-02-17 04:48 GMT

             ಅಜಯ್ ಅಮರಚಿಂತ

‘‘ಎನ್ನಾಮ್ಮಾ... ಸಾಪಟಿಂಗಳ? ವಯಸ್ಸು ಪಸಂಗ ನಲ್ಲ ಸಾಪಡಣು’’ ಹೀಗೆ ಹೇಳುತ್ತಾ ಎದುರಾದವಳು ಮುರುಗಮ್ಮ. ಮುರುಗಮ್ಮ ನಮ್ಮ ಆಫೀಸಿನ ಹೌಸ್ ಕೀಪಿಂಗ್ ಸಿಬ್ಬಂದಿ. ಅರವತ್ತರ ಆಸುಪಾಸಿನಲ್ಲಿರುವ ಮುರುಗಮ್ಮನ ಮುಖದ ಮೇಲಿನ ಸುಕ್ಕು, ಅವಳ ಜೀವನದ ಹಲವು ಮಜಲುಗಳನ್ನು ಪರಿಚಯಿಸುವಂತಿತ್ತು. ‘ರೆಸ್ಟ್’ರೂಮಿಗೆ ಹೋದಾಗಲೆಲ್ಲ ಮುರುಗಮ್ಮಳ ಬಳಿ ಒಂದು ಕ್ಷಣ ನಿಂತು ಮಾತಾಡಿಸಿ ಹೋಗುವುದು ಹೇಗೋ ರೂಢಿಯಾಗಿಬಿಟ್ಟಿತ್ತು. ಮುರುಗಮ್ಮಳಿಗೆ ಎರಡು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳಿದ್ದಾಳೆ. ತನ್ನ ಒಬ್ಬಳೇ ಮಗಳು ಗಂಡನ ಜೊತೆ ಚೆನ್ನೈನಲ್ಲಿ ನೆಲೆಸಿದ್ದರೆ, ಗಂಡು ಮಕ್ಕಳಿಬ್ಬರೂ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಆದರೆ ಮುರುಗಮ್ಮ ಮಾತ್ರ ಯಾವ ಮಕ್ಕಳ ಮನೆಯಲ್ಲಿಯೂ ಇಲ್ಲ. ಎಂದೋ ಗತಿಸಿಹೋದ ತನ್ನ ಗಂಡ ಕಟ್ಟಿಸಿದ ಮನೆಯಲ್ಲಿಯೇ ಇದ್ದಾಳೆ. ನೀನ್ಯಾಕೆ ಮಕ್ಕಳ ಜೊತೆ ಇರಬಾರದು? ಎಂದರೆ ಈ ಮುದುಕಿ ನಮ್ಮ ಮನೆಯವರು ಕಟ್ಟಿಸಿದ್ದಮ್ಮಾ ಎಂದು ಹಳೆಯ ನೆನಪುಗಳನ್ನೆಲ್ಲಾ ನೆನೆದು ಗದ್ಗದಿತವಾಗುತ್ತಾಳೆ. ನಾನೆಂದೂ ಆಕೆ ನಿರುಮ್ಮಳವಾಗಿದ್ದಿದ್ದನ್ನು ನೋಡಲೇ ಇಲ್ಲ. ಸದಾ ಮಕ್ಕಳು, ಮೊಮ್ಮಕ್ಕಳು ಹಾಗು ಸೊಸೆಯಂದಿರ ಬಗ್ಗೆಯೇ ಯೋಚಿಸುತ್ತಿದ್ದ ಮುರುಗಮ್ಮ ‘ಕರುಮಾರಿಯಮ್ಮ’ ಎಂಬ ದೇವತೆಯ ಅಪ್ಪಟ ಭಕ್ತೆ. ಅವಳ ಕುಟುಂಬಕ್ಕೆ, ಪ್ರೀತಿ ಪಾತ್ರರಿಗೆ ಯಾವುದೇ ತೊಂದರೆಯಾದರೂ ಇವಳು ದೂರುತ್ತಿದ್ದುದೂ ಸಹ ಕರುಮಾರಿಯಮ್ಮನನ್ನೆ!

ಮುರುಗಮ್ಮಳ ಎರಡು ಗಂಡು ಮಕ್ಕಳಲ್ಲಿ ಒಬ್ಬ ಕುಡುಕ. ಕುಡಿತದ ವ್ಯಸನಿಯಾದ ಕಾರಣ ಅವನ ಮನೆಯಲ್ಲಿ ದುಡಿಯುತ್ತಿದ್ದುದ್ದು ಆತನ ಹೆಂಡತಿ. ಮುರುಗಮ್ಮ ಸಹ ಅವನ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಾಳೆ. ತನ್ನ ಮೊಮ್ಮಗಳು ಇಂಗ್ಲಿಷ್ ಮೀಡಿಯಂ ಶಾಲೆಗೆ ಹೋಗುತ್ತಾಳೆ ಎಂದು ಹಿಗ್ಗುತ್ತಾಳೆ. ಹೆಣ್ಣುಮಕ್ಕಳು ಚೆನ್ನಾಗಿ ಓದಬೇಕು ಎಂದು ಉಪದೇಶವನ್ನೂ ಮಾಡುತ್ತಾಳೆ. ಕೆಲವು ದಿನಗಳ ಹಿಂದೆ ತನ್ನ ಕುಡುಕ ಮಗನಿಗೆ ಅಪಘಾತವಾಗಿ, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ, ಯಾವುದೇ ದೂರುಗಳಿಲ್ಲದೆ ಈಕೆ ಕೆಲಸಕ್ಕೆ ಬಂದಿದ್ದಳು. ಕೆಲಸ ಮುಗಿದ ತಕ್ಷಣವೇ ತನ್ನ ಇಷ್ಟ ದೇವತೆ ಕರುಮಾರಿಯಮ್ಮನನ್ನು ನೆನೆದು ತನ್ನ ಮಗನನ್ನು ನೋಡಲು ಆಸ್ಪತ್ರೆ ಕಡೆಗೆ ಓಡುತ್ತಿದ್ದಳು.

ಹೀಗೊಂದು ದಿನ ಮಧ್ಯಾಹ್ನ, ಮುರುಗಮ್ಮ ಮೆಟ್ಟಿಲುಗಳ ಬಳಿ ಅಳುತ್ತಿದ್ದಳು. ಏನಾಯಿತು ಎಂದು ಒಮ್ಮೆಲೆ ಅವಳ ಹತ್ತಿರ ಧಾವಿಸಿ, ವಿಚಾರಿಸಿದಾಗ ‘ಏನಮ್ಮಾ... ದೇವರು ದೇವರು ಅಂತ ನಾವು ಪೂಜಿಸ್ತೀವಿ ಆದರೆ ಅಲ್ಲಿ ಮಳೆ ಬಂದು ಎಲ್ಲರ ಮನೆಗಳು ಕೊಚ್ಚಿಕೊಂಡು ಹೋಗುತ್ತಿದೆ. ಎಷ್ಟೊಂದು ಸಾವು ನೋವುಗಳು’ ಎಂದಳು.

ಒಂದೆರಡು ಕ್ಷಣಗಳ ನಂತರ ಈಕೆ ಕೇರಳ ಹಾಗೂ ಕೊಡಗಿನ ಪ್ರವಾಹದ ಬಗ್ಗೆ ಹೇಳುತ್ತಿದ್ದಾಳೆ ಎಂದು ತಿಳಿಯಿತು. ತನ್ನ ಮಗನಿಗೆ ಅಪಘಾತವಾಗಿ, ಆಸ್ಪತ್ರೆಯಲ್ಲಿ ಮಲಗಿದ್ದಾಗಲೂ ಎದೆಗುಂದದೆ ಧೈರ್ಯವಾಗಿದ್ದ ಈ ತಾಯಿ, ತನಗೆ ಪರಿಚಯವೇ ಇರದ ನೂರಾರು ಅಪರಿಚಿತ ಜೀವಗಳ ಬಗ್ಗೆ ಮರುಗಿದಳು. ಆಕೆ ತನ್ನ ಮರುಕವನ್ನೂ ಮೀರಿ ಒಂದು ಸಾವಿರ ರೂ.ಅನ್ನು ಸಂತ್ರಸ್ತರ ಪರಿಹಾರ ನಿಧಿಗೆ ನೀಡಿದಾಗ ನನಗೆ ನೆನಪಾದದ್ದು ಬೈಬಲ್‌ನಲ್ಲಿ ಕ್ರಿಸ್ತ ಉದಾಹರಿಸುವ ಬಡ ವಿಧವೆ. ಈ ಸಾವಿರ ರೂ. ನಮಗೆ ನಿಮಗೆ ಒಂದು ಮೊತ್ತವೇ ಅಲ್ಲವೆನಿಸಬಹುದು. ಆದರೆ ಮುರುಗಮ್ಮನಂತಹ ‘ಹೌಸ್’ ಕೀಪಿಂಗ್ ಕೆಲಸ ಮಾಡುವ ಬಹಳಷ್ಟು ಮಂದಿಗೆ ಸಾವಿರ ರೂಪಾಯಿ ಇಂದಿಗೂ ದೊಡ್ದ ಮೊತ್ತವೇ. ಸಾವುಗಳನ್ನೂ ಸಂಭ್ರಮಿಸುವ ಈ ವಿಷಮ ಕಾಲಘಟ್ಟದಲ್ಲಿ ಮುರುಗಮ್ಮನಂತಹವರು ಮೇರು ವ್ಯಕ್ತಿಗಳಾಗಿಯೂ, ಆದರ್ಶ ವ್ಯಕ್ತಿಗಳಾಗಿಯೂ ನಿಲ್ಲುತ್ತಾರೆ.

Writer - ಅಜಯ್ ಅಮರಚಿಂತ

contributor

Editor - ಅಜಯ್ ಅಮರಚಿಂತ

contributor

Similar News