×
Ad

ಪಿಎಂಜೆಎವೈ ಜಾಹೀರಾತು: ಪ್ರಧಾನಿ ಮೋದಿ ಭಾವಚಿತ್ರ ಮಾತ್ರ ಬಳಕೆಗೆ ಸಿಎಂ ಕುಮಾರಸ್ವಾಮಿ ಆಕ್ಷೇಪ

Update: 2019-02-17 20:38 IST

ಬೆಂಗಳೂರು, ಫೆ. 17: ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಜಾರಿಯಲ್ಲಿ ರಾಜ್ಯ ಸರಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅಲ್ಲದೆ, ಯೋಜನೆ ಜಾಹೀರಾತಿನಲ್ಲಿ ಪ್ರಧಾನಿ ಮೋದಿ ಭಾವಚಿತ್ರವಷ್ಟೇ ಬಳಸುತ್ತಿರುವುದು ಸಲ್ಲ ಎಂದು ಆಕ್ಷೇಪಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಈ ಸಂಬಂಧ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಜನಸಾಮಾನ್ಯರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರಕಾರ 2018ರ ಮಾರ್ಚ್‌ನಲ್ಲಿ ಆರೋಗ್ಯ ಕರ್ನಾಟಕ ಯೋಜನೆಗೆ ಚಾಲನೆ ನೀಡಿತು. ಈ ಯೋಜನೆಯಡಿ ಬಿಪಿಎಲ್ ಕುಟುಂಬದವರಿಗೆ ವಾರ್ಷಿಕ 2 ಲಕ್ಷ ರೂ.ವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಕೇಂದ್ರ ಸರಕಾರ 2018ರ ಮಾರ್ಚ್ 21ರಂದು ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ಆರಂಭಿಸಿತು. ಈ ಯೋಜನೆಯಡಿ ದೇಶದ 10ಕೋಟಿ ಬಡ ಕುಟುಂಬಗಳಿಗೆ ಆರೋಗ್ಯ ಸೇವೆ ನೀಡುವ ಗುರಿ ಇರಿಸಿಕೊಳ್ಳಲಾಗಿದೆ

ಬಳಿಕ ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ಯೋಜನೆ ವಿಲೀನ ಮಾಡಲಾಯಿತು. ರಾಜ್ಯದಲ್ಲಿ ಬಿಪಿಎಲ್ ಕುಟುಂಬಗಳು 1.20ಕೋಟಿ ಇವೆ. ಕೇಂದ್ರ ಪ್ರಾಯೋಜಿತ ಯೋಜನೆಯಡಿ 62.2 ಲಕ್ಷ ಕುಟುಂಬಗಳಿಗೆ ಲಾಭ ಸಿಗುತ್ತಿತ್ತು. ವಿಲೀನಗೊಂಡ ಬಳಿಕ ಯೋಜನೆಗೆ ರಾಜ್ಯ ಸರಕಾರ 139ಕೋಟಿ ರೂ.ಭರಿಸಿದ್ದರೆ, ಕೇಂದ್ರ ಸರಕಾರ ಕೊಟ್ಟಿದ್ದು 22 ಕೋಟಿ ರೂ.ಮಾತ್ರ ಎಂದು ಕುಮಾರಸ್ವಾಮಿ ಪತ್ರದಲ್ಲಿ ಹೇಳಿದ್ದಾರೆ.

ಯೋಜನೆಯ ಫಲಾನುಭವಿಗಳಿಗೆ ಪ್ರಧಾನಿ ಇತ್ತೀಚೆಗೆ ಪತ್ರ ಬರೆದಿದ್ದಾರೆ. ಇದರಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಯ ಬಗ್ಗೆ ಮಾತ್ರ ಉಲ್ಲೇಖ ಇದೆ. ಇದರಿಂದ ಗೊಂದಲಗಳು ಸೃಷ್ಟಿಯಾಗಿವೆ. ಈ ಕಾರ್ಯಕ್ರಮದ ಬಗ್ಗೆ ಜಾಹೀರಾತು ನೀಡುವ ವೇಳೆ ಕೇಂದ್ರ ಹಾಗೂ ರಾಜ್ಯ ಸರಕಾರದ ಆಡಳಿತಗಾರರ ಭಾವಚಿತ್ರ ಪ್ರಕಟಿಸಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅದನ್ನು ಕಡೆಗಣಿಸಲಾಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News