ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಇದು ಸಕಾಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

Update: 2019-02-17 15:24 GMT

ಬೆಂಗಳೂರು, ಫೆ. 17: ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಇದು ಸಕಾಲ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸೈನಿಕರಿಗೆ ಮುಕ್ತ ಸ್ವಾತಂತ್ರ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ರವಿವಾರ ಇಲ್ಲಿನ ಮೌರ್ಯ ವೃತ್ತದಲ್ಲಿ ಬಿಜೆಪಿ ಏರ್ಪಡಿಸಿದ್ದ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಹಾಗೂ ಭಯೋತ್ಪಾದನೆ ವಿರುದ್ಧ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಗ್ರರ ಉತ್ಪಾದನೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕಿದೆ ಎಂದರು.

ಉರಿ ಪ್ರದೇಶದಲ್ಲಿ ದಾಳಿಕೋರರ ಹುಟ್ಟಡಗಿಸಿದಂತೆ, ಪುಲ್ವಾಮಾ ದಾಳಿಗೂ ಪ್ರತ್ಯುತ್ತರ ನೀಡಬೇಕಿದೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಲು ನಾವೆಲ್ಲ ಕೇಂದ್ರ ಸರಕಾರದ ಬೆಂಬಲಕ್ಕೆ ನಿಲ್ಲಬೇಕಿದೆ ಎಂದ ಅವರು, ಪಾಕ್ ವಿರುದ್ಧ ಎಲ್ಲ ರಾಷ್ಟ್ರಗಳು ಆರ್ಥಿಕ ದಿಗ್ಭಂಧನ ವಿಧಿಸಲು ಮುಂದಾಗಿರುವುದು ಸ್ವಾಗತಾರ್ಹ ಎಂದರು.

‘ಕಾಶ್ಮೀರದಲ್ಲಿ ದೋ ಪ್ರಧಾನ್, ದೋ ವಿಧಾನ್, ದೋ ನಿಶಾನ್’ ಇರಬಾರದೆಂದು ಶ್ಯಾಮ್‌ಪ್ರಸಾದ್ ಮುಖರ್ಜಿ ಹೇಳಿದ್ದರು. ಆದರೆ, ಕಾಂಗ್ರೆಸ್‌ನ ದುರ್ಬಲ ಆಡಳಿತದಿಂದ ಕಾಶ್ಮೀರದಲ್ಲಿನ ಸಮಸ್ಯೆ ಬೆಳೆಯಿತು. ಭಾರತದೊಂದಿಗೆ ನಡೆದ ಎಲ್ಲ ಯುದ್ಧಗಳಲ್ಲಿ ಪಾಕಿಸ್ತಾನ ಸೋತರು, ಬುದ್ಧಿ ಕಲಿತಿಲ್ಲ. ಈಗಿರುವ ನಮ್ಮ ಬಲಿಷ್ಠ ಕೇಂದ್ರ ಸರಕಾರ ತಕ್ಕ ಪಾಠ ಕಲಿಸಲಿದೆ ಎಂದು ಬಿಎಸ್‌ವೈ ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದಲ್ಲಿ ಉಗ್ರವಾದ ಹೆಚ್ಚಲು ಕಾಂಗ್ರೆಸ್ ಕಾರಣ. ನಮ್ಮ ಸೈನಿಕರಿಗೆ ಶತ್ರುಗಳ ಮೇಲೆ ನಿಗಾ ಇರಿಸಲು ಅಗತ್ಯವಾಗಿದ್ದ ರಾತ್ರಿ ವೀಕ್ಷಣೆಗೆ ಕನ್ನಡಕವನ್ನು ಯುಪಿಎ ಆಡಳಿತದಲ್ಲಿ ನೀಡಲಿಲ್ಲ. ಆದರೆ, ಪ್ರಧಾನಿ ಮೋದಿ ಸೈನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದಾರೆಂದು ಹೇಳಿದರು.

ಸುಮಾರು 45 ಸಾವಿರ ಚ.ಕಿ.ಮೀ.ಪ್ರದೇಶ ಈಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. ನಮ್ಮ ದೇಶದ ಉಪ್ಪುತಿಂದು, ನೀರು ಕುಡಿಯುತ್ತಿರುವ ಹುರಿಯತ್ ನಾಯಕರು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಅಂತವರಿಗೆ ನೀಡಿದ ಭದ್ರತೆಯನ್ನು ಹಿಂಪಡೆದಿರುವುದು ಉತ್ತಮ ನಡೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಪಾಕಿಸ್ತಾನ ಭಯೋತ್ಪಾದಕರನ್ನು ರಫ್ತು ಮಾಡುತ್ತಿರುವ ದೇಶ. ಅಂತ ದೇಶಕ್ಕೆ ಚೀನಾವೂ ಬೆಂಬಲ ನೀಡುತ್ತಿದೆ. ಪಾಕಿಸ್ತಾನದ ವಸ್ತುಗಳು ಭಾರತದ ಒಳಗೆ ತರಲು ಶೇ.200ರಷ್ಟು ತೆರಿಗೆ ವಿಧಿಸಿರುವುದು ಒಳ್ಳೆಯ ತೀರ್ಮಾನ ಎಂದು ನುಡಿದರು.

ಪಾಕಿಸ್ತಾನಕ್ಕೆ ನಾವು ಸಾಹಿತ್ಯಕ, ಸಾಂಸ್ಕೃತಿಕ, ಕ್ರೀಡಾತ್ಮಕವಾಗಿ ದಿಗ್ಬಂಧನ ಹಾಕಬೇಕಿದೆ. ಅಲ್ಲಿನ ಕಲಾವಿದರು, ಸಾಹಿತಿಗಳು, ಕ್ರೀಡಾಪಟುಗಳು ನಮ್ಮ ದೇಶಕ್ಕೆ ಬರುವುದನ್ನು ತಡೆಯಬೇಕಿದೆ ಎಂದು ಅವರು, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News