ಕೆ.ಎಸ್.ನಿಸಾರ್ ಅಹ್ಮದ್ ಸರಸ್ವತಿ ಪುತ್ರ: ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ

Update: 2019-02-17 15:32 GMT
ಕೆ.ಎಸ್.ನಿಸಾರ್ ಅಹ್ಮದ್

ಬೆಂಗಳೂರು, ಫೆ.17: ನಮಗೆ ವಿದ್ಯೆಯನ್ನು ಕರುಣಿಸುವ ಸರಸ್ವತಿ ಯಾವುದೆ ಜಾತಿ, ಧರ್ಮಕ್ಕೆ ಅಂಟಿಕೊಂಡವಳಲ್ಲ. ಯಾರಲ್ಲಿ ಪ್ರತಿಭೆ, ಆಸಕ್ತಿ, ಉತ್ಸಾಹವಿರುತ್ತದೆಯೊ ಅಲ್ಲಿ ನೆಲೆ ನಿಲ್ಲುತ್ತಾಳೆ. ಹೀಗಾಗಿ ನಾಡಿನ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹ್ಮದ್ ನಿಜವಾಗಿ ಸರಸ್ವತಿ ಪುತ್ರರಾಗಿದ್ದಾರೆ ಎಂದು ಹಿರಿಯ ಕವಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ತಿಳಿಸಿದರು.

ರವಿವಾರ ಸಗೀತ ಧಾಮ ನಗರದ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಗೀತ ಧಾಮ ಸಂಭ್ರಮ-15ಕಾರ್ಯಕ್ರಮದಲ್ಲಿ ಕವಿ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್‌ಗೆ ಸಾಹಿತ್ಯ ಕೌಸ್ತುಭ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕವಿ, ಲೇಖಕರು ತಮ್ಮ ಸಾಹಿತ್ಯದ ಮೂಲಕ ಮಾನವನ ಅಂತರಂಗದ ಅನುಭವಗಳನ್ನು ಜಗತ್ತನೆದುರಿಗೆ ತೆರೆದಿಟ್ಟು, ಆತ್ಮಾವಲೋಕನ, ವಿಮರ್ಶೆಗೆ ಒಡ್ಡುತ್ತಾರೆ. ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ, ಚೆನ್ನವೀರ ಕಣವಿ ಹಾಗೂ ಇವರ ಸಾಲಿನಲ್ಲಿ ನಿಸಾರ್ ಅಹ್ಮದ್ ತಮ್ಮ ಕವಿತೆಗಳ ಮೂಲಕ ಸರಸ್ವತಿಯನ್ನು ಒಲಿಸಿಕೊಂಡವರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕವಿ ಹಾಗೂ ಲೇಖಕರು ತಮ್ಮ ಧರ್ಮಗಳಲ್ಲಿರುವ ಸಮಸ್ಯೆಗಳ ಕುರಿತು ಎಲ್ಲಿಯೂ ಪ್ರಸ್ತಾಪಿಸದೆ ನುಣುಚಿಕೊಳ್ಳಲು ಪ್ರಯತ್ನಿಸುವವರೆ ಹೆಚ್ಚು. ಆದರೆ, ಕವಿ ನಿಸಾರ್ ಅಹ್ಮದ್ ಮುಸ್ಲಿಂ ಸಂವೇದನೆಯನ್ನಿಟ್ಟುಕೊಂಡೆ, ಅದರ ಚೌಕಟ್ಟನ್ನು ಮೀರಿ ಬೆಳೆದವರು. ಮಹಿಳೆಯರ ಬುರ್ಖಾ ಸೇರಿದಂತೆ ಮುಸ್ಲಿಮ್ ಸಮುದಾಯದಲ್ಲಿರುವ ಹಲವು ವಿಷಯಗಳ ಕುರಿತು ತಮ್ಮ ಕವಿತೆಗಳಲ್ಲಿ ವಿಡಂಬನಾತ್ಮಕವಾಗಿ ಬರೆದಿದ್ದಾರೆ ಎಂದು ಅವರು ಹೇಳಿದರು

ನಿಸಾರ್ ಅಹ್ಮದ್‌ರವರ ಜನಪ್ರಿಯ ಕವನಗಳನ್ನೊಳಗೊಂಡ ಗಾಂಧಿ ಬಝಾರ್ ಕವನ ಸಂಕಲನ 1960ರಲ್ಲಿ ಪ್ರಕಟಗೊಂಡಿತು. 12 ಗದ್ಯ, ಪ್ರಬಂಧ, ವಿಮರ್ಶೆಯ ಲೇಖನ ಸಂಕಲನ, 5 ಮಕ್ಕಳ ಸಾಹಿತ್ಯ ಗ್ರಂಥ, 5 ಅನುವಾದ ಗ್ರಂಥಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಹಿರಿಮೆ ಅವರದು. ನಿತ್ಯೋತ್ಸವ ಕವನ ಸಂಕಲನವು 24 ಬಾರಿ ಮುದ್ರಣವಾಗಿರುವುದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶೇಕ್ಸ್‌ಪಿಯರ್‌ನ ನಾಟಕಗಳು, ರಷ್ಯನ್ ಕತೆಗಳು, ಸ್ಪಾನಿಷ್ ಕವಿ ಪಾಬ್ಲೊ ನೆರುಡನ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. 1968ರಲ್ಲಿ ಮೊದಲ ಬಾರಿಗೆ ಭಾವಗೀತೆಗಳು ಧ್ವನಿಸುರುಳಿಯನ್ನು ಹೊರತಂದು ಸುಗಮ ಸಂಗೀತ ಕ್ಷೇತ್ರದಲ್ಲಿ ಹೊಸ ಹಾದಿಯನ್ನು ನಿರ್ಮಿಸಿದ ಹಿರಿಮೆ ಇವರದು ಎಂದು ಅವರು ತಿಳಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ, ಕವಿ ಕೆ.ಎಸ್.ನಿಸಾರ್ ಅಹ್ಮದ್‌ರವರ ನಿತ್ಯೋತ್ಸವ ಕವಿತೆಯಲ್ಲಿ ಸಾಹಿತ್ಯ, ಇತಿಹಾಸದ ದರ್ಶನ, ಪ್ರಕೃತಿ ಸೊಬಗು, ನಾಡಿನ ಸಂಸ್ಕೃತಿಯ ಹಿರಿಮೆಯನ್ನು ಮನಮೋಹಕವಾಗಿ ಕಟ್ಟಿಕೊಟ್ಟಿದ್ದಾರೆ. ಈ ಕವಿತೆ ಎಲ್ಲ ಕಾಲಕ್ಕೂ ಸಲ್ಲುವಂತಹದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಸಾರ್ ಅಹ್ಮದ್‌ರವರ ‘ಕುರಿಗಳು ಸರ್ ಕುರಿಗಳು’ ಎಂಬ ಕವಿತೆಯ ಬರೆದು ಎರಡು ಮೂರು ದಶಕಗಳು ಕಳೆದಿವೆ. ಆದರೆ, ಅದರಲ್ಲಿರುವ ರಾಜಕೀಯ ವಿಡಂಬನೆ ಇವತ್ತಿನ ರಾಜಕೀಯ ಸ್ಥಿತಿಗತಿಗಳಿಗೆ ಸರಿಯಾಗಿ ಹೊಂದುವಂತಹದ್ದಾಗಿದೆ. ಹೀಗೆ ಕವಿ ನಿಸಾರ್ ಅಹ್ಮದ್ ದಾರ್ಶನಿಕರಾಗಿ ತಮ್ಮ ಕವಿತೆಗಳ ಮೂಲಕ ನಮ್ಮೆಲ್ಲರನ್ನು ಸದಾ ಎಚ್ಚರದ ಸ್ಥಿತಿಯಲ್ಲಿಟ್ಟಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಗಾಯಕ ವೈ.ಕೆ.ಮುದ್ದುಕೃಷ್ಣ, ಉದ್ಯಮಿ ಎಸ್.ಷಡಕ್ಷರಿ, ರಂಗ ಸಂಘಟಕ ಶ್ರೀನಿವಾಸ ಜಿ.ಕಪ್ಪಣ್ಣ ಸಂಗೀತಧಾಮದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ. ಕಾರ್ಯದರ್ಶಿ ರೇಣುಕಾ ನಿತಿನ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News