ಗಾಯನ ಸಮಾಜದಲ್ಲಿ ಅವ್ಯವಹಾರ ಆರೋಪ: ದೂರುದಾರನಿಗೆ ನೋಟಿಸ್ ಜಾರಿಗೊಳಿಸಿದ ವಿಚಾರಣಾಧಿಕಾರಿ

Update: 2019-02-17 15:40 GMT

ಬೆಂಗಳೂರು, ಫೆ.17: ಬೆಂಗಳೂರು ಗಾಯನ ಸಮಾಜದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಆರೋಪ ಕುರಿತಂತೆ ವಿಚಾರಣೆ ನಡೆಸುವ ದಿಸೆಯಲ್ಲಿ ವಿಚಾರಣಾಧಿಕಾರಿ ದೂರುದಾರರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಈ ಕುರಿತಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರೂ ಆ ವಿಚಾರಣಾಧಿಕಾರಿ ಕಿಶೋರ್ ಜೋಷಿ ಅವರು ದೂರುದಾರ ಎಸ್.ಕೆ.ಮೂರ್ತಿ ಅವರಿಗೆ ನೋಟಿಸ್ ಜಾರಿಗೊಳಿಸಿದ್ದು, ದೂರಿನಲ್ಲಿನ ಅಂಶಗಳಿಗೆ ಸಂಬಂಧಿಸಿದಂತೆ ನಿಮ್ಮ ಬಳಿ ಇರುವ ಅಗತ್ಯ ದಾಖಲೆಗಳನ್ನು ಲಿಖಿತ ಹೇಳಿಕೆಯೊಂದಿಗೆ ಇದೇ 23ರಂದು ಕಚೇರಿಗೆ ಹಾಜರಾಗಿ ಸಲ್ಲಿಸಿ ಎಂದು ಸೂಚಿಸಿದ್ದಾರೆ.

ಪ್ರಕರಣವೇನು: ಬೆಂಗಳೂರು ಗಾಯನ ಸಮಾಜದಲ್ಲಿ ಅನೇಕ ಅವ್ಯವಹಾರ ನಡೆದಿವೆ ಎಂದು ಆರೋಪಿಸಿ ಎನ್.ವೆಂಕಟೇಶ್ ಹಾಗೂ ಎಸ್.ಕೆ.ಮೂರ್ತಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು. ಮುಖ್ಯ ಕಾರ್ಯದರ್ಶಿಗಳು ಈ ದೂರನ್ನು ಸೂಕ್ತ ಕ್ರಮಕ್ಕಾಗಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ರವಾನಿಸಿದ್ದರು.

ಈ ಸಂಬಂಧ ಜಿಲ್ಲಾ ನೋಂದಣಾಧಿಕಾರಿ ಪಿ.ಶಶಿಧರ್ ಅವರು, 2018ರ ನವೆಂಬರ್ 14ರಂದು ಆದೇಶ ಹೊರಡಿಸಿ, ಕಿಶೋರ್ ಜೋಷಿ ಅವರನ್ನು ವಿಚಾರಣಾ ಅಧಿಕಾರಿಯಾಗಿ ನೇಮಿಸಿದ್ದರು. ದೂರಿನ ಕುರಿತಂತೆ ಮೂರು ತಿಂಗಳ ಒಳಗಾಗಿ ವಿಚಾರಣೆ ನಡೆಸಿದ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಮೂರು ತಿಂಗಳ ಅವಧಿ ಇದೇ 23ಕ್ಕೆ ಮುಕ್ತಾಯವಾಗಲಿದೆ.

ಬೆಂಗಳೂರು ಗಾಯನ ಸಮಾಜದ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲ, ಕಲಾವಿದರ ಆಯ್ಕೆ, ಸಂಭಾವನೆ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಮತ್ತು ಸಂಸ್ಥೆಗೆ ದಾನಿಗಳು ನೀಡಿದ ಗ್ರಂಥಗಳು ಹಾಗೂ ಸಂಗೀತ ವಾದ್ಯ, ಸಲಕರಣೆಗಳನ್ನು ಸಂಘದ ಅಧ್ಯಕ್ಷರು ಮತ್ತು ಅನುಯಾಯಿಗಳು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬುದೂ ಸೇರಿದಂತೆ 12ಕ್ಕೂ ಹೆಚ್ಚು ಗುರುತರ ಅರೋಪ ಮಾಡಲಾಗಿದೆ.

ಆಕ್ಷೇಪ: ಮೂರು ತಿಂಗಳ ಒಳಗಾಗಿ ವಿಚಾರಣೆ ನಡೆಸಿ ಎಂದು ಆದೇಶಿಸಲಾಗಿದೆ. ಆದರೆ, ಮೂರು ತಿಂಗಳ ಅವಧಿ ಇದೇ 23ಕ್ಕೆ ಈ ಅವಧಿ ಮುಕ್ತಾಯಗೊಳ್ಳುತ್ತಿದೆ ಎಂಬುದು ದೂರುದಾರ ಎಸ್.ಕೆ.ಮೂರ್ತಿ ಆಕ್ಷೇಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News