ಕಲಾತ್ಮಕ ಸಿನಿಮಾಗಳಿಗೂ ಬೇಕು ಚಿತ್ರಮಂದಿರ: ನ್ಯಾ.ಎ.ಜೆ.ಸದಾಶಿವ

Update: 2019-02-17 16:05 GMT

ಬೆಂಗಳೂರು, ಫೆ.17: ಕಲಾತ್ಮಕ ಸಿನಿಮಾಗಳು ಸಹ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಧೀಶ ಎ.ಜೆ.ಸದಾಶಿವ ಇಂದಿಲ್ಲಿ ಅಭಿಪ್ರಾಯಪಟ್ಟರು.

ರವಿವಾರ ವಸಂತನಗರದ ಚಾಮುಂಡೇಶ್ವರಿ ಸ್ಟುಡಿಯೊ ಸಭಾಂಗಣದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಕರಾಗಿರುವ ‘ಮೂಕನಾಯಕ’ ಕನ್ನಡ ಸಿನಿಮಾದ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ಕಾಲಘಟ್ಟದಲ್ಲಿ ಸಮಾಜಕ್ಕೆ ಸಂದೇಶಗಳೇ ನೀಡದ ಅನೇಕ ಸಿನಿಮಾಗಳು ದೊಡ್ಡ ದೊಡ್ಡ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ. ಆದರೆ, ಸಮಾಜದ ಒಳ್ಳೇತನ ಬಯಸುವ ಕಲಾತ್ಮಕ ಸಿನಿಮಾಗಳು ಏಕೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗುವುದಿಲ್ಲ. ಇದಕ್ಕೆ ಕಾರಣಗಳೇನು ಎಂದು ಅವರು ಪ್ರಶ್ನೆ ಮಾಡಿದರು.

ಅಧಿಕ ಹಣ ಸಂಪಾದನೆ, ಜಗಳ, ದಂಗೆ, ಗದ್ದಲ ಹೀಗೆ ಅಶಾಂತಿ ವಿಷಯಗಳನ್ನೇ ಇಟ್ಟುಕೊಂಡು, ಸಿನಿಮಾ ನಿರ್ಮಿಸಿ ಆದಾಯ ಗಳಿಕೆ ಹೆಚ್ಚಿಸುವ ಕಾಯಕದಲ್ಲಿ ಕೆಲವರು ನಿರತರಾಗಿದ್ದಾರೆ. ಆದರೆ, ಇದರಿಂದ ಜನರ ಆಲೋಚನಾ ಶಕ್ತಿಯೇ ಹಾಳಾಗಿ ಹೋಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ಸಿನಿಮಾ ನಿರ್ದೇಶಕ ಎಸ್.ಕೆ.ಭಗವಾನ್ ಮಾತನಾಡಿ, ಜನಪ್ರಿಯತೆ ಪಡೆಯುವಲ್ಲಿ ಕಲಾತ್ಮಕ ಚಿತ್ರಗಳು ಎಡವಿದೆ. ಆದರೆ, ಕಾದಂಬರಿ, ಕಥೆ ಆಧಾರಿತ ಕಲಾತ್ಮಕ ಸಿನಿಮಾಗಳನ್ನೇ ನಿರ್ಮಿಸಿ, ಯಶಸ್ಸು ಕಂಡವರ ಸಂಖ್ಯೆ ಸಾಕಷ್ಟಿದೆ. ಹೀಗಾಗಿ, ವಾಣಿಜ್ಯೋದ್ಯಮ ಸಿನಿಮಾಗಳಲ್ಲೂ ಸಾಹಿತ್ಯ ಸಂಗಮವಾಗಬೇಕು ಎಂದರು.

ಮನೆಗೆ ಬಂತು ಸಿನಿಮಾ: ನಿರ್ದೇಶಕ ಬರಗೂರ ರಾಮಚಂದ್ರಪ್ಪ ಅವರ ‘ಮೂಕನಾಯಕ’ ಸಿನಿಮಾದ ನೂರು ಪ್ರದರ್ಶನಗಳ ಪರ್ಯಾಯ ಬಿಡುಗಡೆ ಪ್ರಯೋಗವು ಇಂದಿನಿಂದ (ಫೆ.17) ರಾಜ್ಯಾದ್ಯಂತ 30 ದಿನಗಳ ಕಾಲ ‘ಚಿತ್ರಯಾತ್ರೆ’ ಹೆಸರಲ್ಲಿ ಆರಂಭವಾಗಿದೆ.

ಚಿತ್ರಯಾತ್ರೆಯಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ‘ಮೂಕ ನಾಯಕ’ ಚಿತ್ರದ 30 ಪ್ರದರ್ಶನಗಳು ನಡೆಯಲಿವೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ ಎಂದು ಚಿತ್ರತಂಡದ ಪ್ರಮುಖರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ, ಸಿನಿಮಾ ನಿರ್ಮಾಪಕ ಬಾಲರಾಜ್ ಎಂ.ಸಂಜೀವ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಇದೊಂದು ಪರ್ಯಾಯ ಚಳುವಳಿ..!

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಧೀಶ ಎ.ಜೆ.ಸದಾಶಿವ ಮಾತನಾಡಿ, ಚಿತ್ರಯಾತ್ರೆಗಳ ಮೂಲಕ ಕಲಾತ್ಮಕ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ಆಗುವುದಿಲ್ಲ. ಇದಕ್ಕೆ ಚಿತ್ರಮಂದಿರಗಳೇ ಬೇಕು ಎಂದರು. ಆದರೆ, ಇದಕ್ಕೆ ವೇದಿಕೆಯಲ್ಲೇ ಉತ್ತರಿಸಿದ ಬರಗೂರು ರಾಮಚಂದ್ರಪ್ಪ, ಜನರ ಬಳಿಯೇ ಸಿನಿಮಾವನ್ನು ತೆಗೆದುಕೊಂಡು ಹೋಗಬೇಕೆಂಬುವುದು ನನ್ನ ಗುರಿ. ಇದೊಂದು ಪರ್ಯಾಯ ಚಳುವಳಿಯ ಭಾಗವಾಗಿದೆ. ಅಷ್ಟೇ ಅಲ್ಲದೆ, ಸಮರ್ಥನೆ ಮತ್ತು ಸ್ಪಷ್ಟನೆ ವಿಭಾಗದಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ನನಗೆ ನೀಡಬೇಕೆಂದು ಹಾಸ್ಯ ಚಟಾಕಿ ಹಾರಿಸಿದರು.

ಕೆಜಿಎಫ್ ನೋಡಿ ತಲೆಕೆಟ್ಟಿತು..!

ಇತ್ತೀಚಿಗೆ ತೆರೆಕಂಡ ಯಶ್ ಅಭಿಯಾನದ ಕೆಜಿಎಫ್ ಸಿನಿಮಾವನ್ನು ಚಿತ್ರ ಮಂದಿರದಲ್ಲಿ ನೋಡಿ, ತಲೆಕೆಟ್ಟು ಹೋಯಿತು. ಜಗಳ, ದಂಗೆ, ಹಣ ಮಾಡುವುದೇ ಸಿನಿಮಾಗಳ ಗುರಿ ಅಲ್ಲ. ಅಲ್ಲದೆ, ಯಾರ ಅಭಿವೃದ್ಧಿಗೆ ಇಂತಹ ಸಿನಿಮಾಗಳು ಬರುತ್ತಿವೆ ?

-ಎ.ಜೆ.ಸದಾಶಿವ, ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News