ನಕಲಿ ದೇಶ ಭಕ್ತಿಯ ಹೆಸರಿನಲ್ಲಿ ಉಗ್ರ ರಾಷ್ಟ್ರೀಯತೆ ಪ್ರತಿಪಾದಿಸುತ್ತಿದ್ದಾರೆ: ಕೆ.ಎಂ.ಶರೀಫ್

Update: 2019-02-17 16:10 GMT

ಬೆಂಗಳೂರು, ಫೆ.17: ನಕಲಿ ದೇಶ ಭಕ್ತಿಯ ಹೆಸರಿನಲ್ಲಿ ಕೆಲವರು ಉಗ್ರ ರಾಷ್ಟ್ರೀಯತೆ ಪ್ರತಿಪಾದಿಸುತ್ತಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಕೆ.ಎಂ.ಶರೀಫ್ ಇಂದಿಲ್ಲಿ ಹೇಳಿದರು.

ನಗರದ ಹೊರವಲಯದ ಹೊಸಕೋಟೆ ಬಿ.ಚೆನ್ನಬೈರೇಗೌಡ ಕ್ರೀಡಾಂಗಣದ ಹುತಾತ್ಮ ಯೋಧ ಎಚ್.ಗುರು ವೇದಿಕೆಯಲ್ಲಿ ಏರ್ಪಡಿಸಿದ್ದ, ದ್ವೇಷ ರಾಜಕೀಯವನ್ನು ಸೋಲಿಸಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಮುಗ್ಧ ಯುವಕರನ್ನು ನಕಲಿ ದೇಶಭಕ್ತಿ ಹೆಸರಿನಲ್ಲಿ ದಿಕ್ಕು ತಪ್ಪಿಸಿ, ಸುಳ್ಳು ಸಿದ್ದಾಂತಗಳನ್ನು ಹೇಳಲಾಗುತ್ತಿದೆ. ಇದನ್ನು, ಪ್ರತಿಯೊಬ್ಬರು ವಿರೋಧಿಸಬೇಕು. ಅಷ್ಟೇ ಅಲ್ಲದೆ, ಯುವ ಪೀಳಿಗೆಯನ್ನು ರಕ್ಷಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದರು.

ಕೇಂದ್ರದ ಮೋದಿ ಸರಕಾರ ಯುದ್ಧ ವಿಮಾನ ಖರೀದಿ ರಫೇಲ್ ಹಗರಣ ಇಡೀ ದೇಶವನ್ನು ನಡುಗಿಸಿದೆ. ರಫೇಲ್ ವಿಚಾರಣೆಯಿಂದ ತಪ್ಪಿಸಲು ಸಿಬಿಐ ಮುಖ್ಯಸ್ಥರನ್ನು ತೆಗೆದು ಹಾಕಲಾಯಿತು ಎಂದು ಆರೋಪಿಸಿದ ಅವರು, ಅಭಿವೃದ್ಧಿ ವೈಫಲ್ಯವನ್ನು ಮುಚ್ಚಿಹಾಕಲು ಬಿಜೆಪಿ ದ್ವೇಷ ರಾಜಕರಣದ ಮೊರೆ ಹೋಗಿದ್ದು, ಬಿಜೆಪಿಯನ್ನು ಸೋಲಿಸಲು ಎಲ್ಲ ಜಾತ್ಯತೀತ ಪಕ್ಷಗಳು ಒಟ್ಟಾಗಬೇಕು ಎಂದರು.

ಒಂದು ಸಮಾಜದ ಮೇಲೆ ದ್ವೇಷ ಸಾಧಿಸುತ್ತಾ ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಸಂವಿಧಾನದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಇನ್ನು, ಮೇಲ್ಜಾತಿ ವರ್ಗಕ್ಕೆ ಶೇಕಡ 10ರಷ್ಟು ಮೀಸಲಾತಿ ನೀತಿ ಜಾರಿಗೆ ತರಲಾಗಿದೆ. ಇದು ಸಂವಿಧಾನ ವಿರೋಧಿ ನೀತಿ ಎಂದು ವಾಗ್ದಾಳಿ ನಡೆಸಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಮಾತನಾಡಿ, ಪಿಎಫ್‌ಐ ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ವಲಯಗಳಲ್ಲಿ ಕೆಲಸ ಮಾಡುತ್ತಿದೆ. ಗೋ ಹತ್ಯೆ ಹೆಸರಿನಲ್ಲಿ ಗಂಪು ಹತ್ಯೆ ನಡೆದಾಗ ಕಾನೂನು ಹೋರಾಟ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸುತ್ತಿದೆ. ಆದರೆ, ಅಪಪ್ರಚಾರದಿಂದ ಸಂಘಟನೆಯ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಸಾಕಿಬ್, ಹಿರಿಯ ಪತ್ರಕರ್ತ ಪಾರ್ವತೀಶ ಬಿಳಿದಾಲೆ, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಷಾ, ಅಬ್ದುಲ್ ರಝಾಕ್ ಕೆಮ್ಮಾರ, ರಿಯಾಝ್ ಫರಂಗಿಪೇಟೆ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News