ರಾಜಕಾರಣಿಗಳಿಗೆ ಸಂವೇದನೆಯಿದ್ದರೆ ಒಳಿತು ಮಾಡಲು ಸಾಧ್ಯ: ನರಹಳ್ಳಿ ಬಾಲಸುಬ್ರಹ್ಮಣ್ಯ

Update: 2019-02-17 16:18 GMT

ಬೆಂಗಳೂರು, ಫೆ.17: ರಾಜಕಾರಣಿಗಳು, ಅಧಿಕಾರಶಾಹಿ ವರ್ಗ ಸಂವೇದನೆಯನ್ನು ಉಳಿಸಿಕೊಂಡಾಗ ಮಾತ್ರ ಮಾನವಕುಲಕ್ಕೆ ಒಳಿತು ಮಾಡಲು ಸಾಧ್ಯ ಎಂದು ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.

ಬಿ.ಎಂ.ಶ್ರೀ ಪ್ರತಿಷ್ಠಾನದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಪ್ರೊ.ಎಲ್.ಎಸ್.ಶೇಷಗಿರಿರಾವ್ ವಿಮರ್ಶಾ ಪ್ರಶಸ್ತಿ, ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ ಹಾಗೂ ಸಾರಂಗಿ ವೆಂಕಟರಾಮಯ್ಯ- ಪುಟ್ಟಚ್ಚಮ್ಮ ದತ್ತಿ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಅವರು ಮಾತನಾಡಿದರು.

ಜನರಿಂದ ಆಯ್ಕೆಯಾಗುವ ರಾಜಕಾರಣಿಗಳು ಸದಾ ಹಣ, ಅಧಿಕಾರದ ಬೆನ್ನತ್ತಿ ಹೋಗುತ್ತಿದ್ದಾರೆ. ಅಧಿಕಾರ, ಸಮಾಜ ಅಭಿವೃದ್ಧಿಯ ಕನಸುಗಳಿದ್ದಾಗಲೇ ಸಮಾಜದ ಅಭಿವೃದ್ಧಿ ಸಾಧ್ಯ. ಆದರೆ, ನಮ್ಮ ಸುತ್ತಮುತ್ತ ಕ್ರೌರ್ಯ, ಹಿಂಸೆ, ಅಸಹನೆ, ಅಸಮಾಧಾನವೇ ಆವರಿಸಿಕೊಂಡಿದ್ದು, ಸಂತೋಷಪಡುವ ಮನೋಭಾವವನ್ನೇ ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು.

ರಾಜಕಾರಣಿಗಳು ಅಕ್ಷರ ಶತ್ರುಗಳು: ಪ್ರಜೆಗಳ ನೋವಿಗೆ ಸ್ಪಂದಿಸಲು ರಾಜಕಾರಣಿಗಳು ಸೂಕ್ಷ್ಮ ಸಂವೇದನಾಶೀಲರಾಗಿರಬೇಕು. ಆದರೆ, ಅವರು ಅಕ್ಷರ ಶತ್ರುಗಳಾಗಿದ್ದಾರೆ. ನಮ್ಮೆಲ್ಲರ ಬವಣೆಗಳಿಗೆ ಇದೇ ಮೂಲ ಕಾರಣ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಪ್ರೊ.ಶೇಷಗಿರಿರಾವ್ ನನಗೆ ಮೇಷ್ಟ್ರು. ಆಧುನಿಕ ಸಾಹಿತ್ಯದ ಜತೆಗೆ ಜಾಗತಿಕ ಸಾಹಿತ್ಯವನ್ನು ಪರಿಚಯಿಸಿದವರು. ಅವರ ಹೆಸರಿನಲ್ಲಿ ನನಗೆ ಪ್ರಶಸ್ತಿ ಸಿಕ್ಕಿರುವುದು ಅತಿದೊಡ್ಡ ಗೌರವವಾಗಿದೆ. ಅವರು ತೋರಿದ ಹಾದಿಯಲ್ಲಿ ಸಾಗಲು ಮತ್ತಷ್ಟು ಶಕ್ತಿ ಸಿಕ್ಕಿದಂತಾಗಿದೆ ಎಂದು ನುಡಿದರು.

ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಆಧುನಿಕತೆಯ ಪರಿಣಾಮದಿಂದಾಗಿ, ಕಂಪ್ಯೂಟರ್‌ನ ಪ್ರಭಾವದಿಂದಾಗಿ ಬರಹಗಾರರು, ಪತ್ರಕರ್ತರು ಕೈ ಬರಹವನ್ನೇ ಮರೆತಿದ್ದಾರೆ. ನಾನು ಪತ್ರಕರ್ತನಾಗಿದ್ದಾಗ ನನ್ನ ಬರವಣಿಗೆಯೇ ನನಗೆ ಮುಳುವಾಗಿ ಪರಿಣಮಿಸಿದ್ದರಿಂದ ಮಾನನಷ್ಟ ಮೊಕದ್ದಮೆ, ಜೈಲುವಾಸವನ್ನೂ ಅನುಭವಿಸಬೇಕಾಯಿತು. ವಿವಿಧ ರೀತಿಯ ನೋವು, ನಲಿವುಗಳನ್ನು ಅನುಭವಿಸಿದ್ದೇವೆ. ಇಂದಿನ ಪರ್ತಕರ್ತರು ಗಟ್ಟಿ ಅನುಭವಗಳನ್ನು ಪಡೆಯಬೇಕೆಂದರೆ ಜೈಲುವಾಸದ ಅನುಭವ ಪಡೆಯಬೇಕು ಎಂದರು.

ಎಚ್.ದಂಡಪ್ಪ ಮಾತನಾಡಿ, ಕನ್ನಡ ಆಡಳಿತ ಭಾಷೆಯಾದಾಗ ಮಾತ್ರ ಕನ್ನಡದ ಸಂಸ್ಕೃತಿ ಉಳಿಯಲು ಸಾಧ್ಯ. ಆದರೆ, ಆಡಳಿತದಲ್ಲಿ ಆಂಗ್ಲಭಾಷೆಯ ಬಳಕೆಯೇ ಹೆಚ್ಚಾಗುತ್ತಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಶಸ್ತಿಗಾಗಿ ಲಾಭಿ ನಡೆಸುವ ಇಂದಿನ ದಿನಮಾನಗಲ್ಲಿ ಯಾವ ಅಪೇಕ್ಷೆಯನ್ನೂ ಇಟ್ಟುಕೊಳ್ಳದೆ ಸಮಾಜಕ್ಕಾಗಿ ಶ್ರಮಿಸುತ್ತಿರುವ ಸಾಧಕರಿಗೆ ಪ್ರಶಸ್ತಿಗಳು ಸಂದಿದೆ. ಸರಕಾರಿ ಶಾಲೆಗಳನ್ನು ವಿಲೀನ ಮಾಡಲ್ಲ. ಐಟಿ, ಬಿಟಿ ಸೇರಿದಂತೆ ಎಲ್ಲ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೊಗ ಮೀಸಲಾತಿ ಜಾರಿಗೆ ತರಲು ಸರೋಜಿನಿ ಮಹೀಷಿ ವರದಿಗೆ ಕೆಲವು ತಿದ್ದಪಡಿ ತರಲಾಗುವುದು ಎಂದು ಸರಕಾರ ಭರವಸೆ ನೀಡಿದೆ.

- ಡಾ.ವಸುಂಧರಾ ಭೂಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News