ಪುಲ್ವಾಮ ದಾಳಿ ಅಕ್ಷಮ್ಯ: ಕರ್ನಾಟಕ ಮುಸ್ಲಿಮ್ ವಿದ್ವಾಂಸರ ಖಂಡನೆ

Update: 2019-02-17 16:57 GMT

ಬೆಂಗಳೂರು, ಫೆ. 17: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿ.ಆರ್.ಪಿ.ಎಫ್ ಯೋಧರನ್ನು ಗುರಿಯಾಗಿಸಿ ನಡೆಸಲಾದ ದಾಳಿಯನ್ನು ಕರ್ನಾಟಕದ ಪ್ರಮುಖ ಮುಸ್ಲಿಮ್ ವಿದ್ವಾಂಸರು ಖಂಡಿಸಿದ್ದಾರೆ. 

ದಾರುಲ್ ಉಲೂಮ್ ಸಬೀಲುರ್ರಶಾದ್ ಬೆಂಗಳೂರು ಮುಖ್ಯಸ್ಥರಾದ ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ಸಾಹೇಬ್ ರಶಾದಿ ನೇತೃತ್ವದಲ್ಲಿ ಸಭೆ ನಡೆಯಿತು.

ಪ್ರಸ್ತುತ ದಾಳಿಯನ್ನು ಸಂಪೂರ್ಣ ದೇಶದ ಮೇಲಿನ ಅಕ್ಷಮ್ಯ ದಾಳಿ ಎಂದು ಪರಿಗಣಿಸುವುದಾಗಿ ಹೇಳಿರುವ ವಿದ್ವಾಂಸರು ಈ ಕೃತ್ಯದ ಹಿಂದೆ ಅಡಗಿರುವ ಭಯೋತ್ಪಾದಕ ಶಕ್ತಿಗಳನ್ನು ಮತ್ತು ಅದರ ಪೋಷಕರನ್ನು ಗುರುತಿಸಿ, ಅವರಿಗೆ ಮರೆಯಲಾಗದ ಪಾಠ ಕಲಿಸಬೇಕೆಂದು ಕೇಂದ್ರ ಸರಕಾರವನ್ನು  ಒತ್ತಾಯಿಸಿದ್ದಾರೆ.

ಫ್ರೆಝರ್ ಟೌನ್ ಮಸೀದಿಯಲ್ಲಿ ಸಭೆ ಸೇರಿದ ವಿವಿಧ ಸಂಸ್ಥೆಗಳನ್ನು ಪ್ರತಿನಿಧಿಸುವ ರಾಜ್ಯದ ಪ್ರಮುಖ ಮುಸ್ಲಿಮ್ ವಿದ್ವಾಂಸರು, ದುರಂತದಲ್ಲಿ ಹತರಾದ ವೀರ ಯೋಧರು ಮತ್ತವರ ಕುಟುಂಬಗಳ ಬಗ್ಗೆ ತಮ್ಮ ಸಹಾನುಭೂತಿಯನ್ನು ಪ್ರಕಟಿಸಿದ್ದಾರೆ. ಭಯೋತ್ಪಾದಕರು ಧರ್ಮವನ್ನು ತಮ್ಮ ಗುರಾಣಿಯಾಗಿ ಬಳಸುತ್ತಾರೆ. ಅಮಾಯಕರನ್ನು ಕೊಲ್ಲುವ ಮತ್ತು ಸಮಾಜದಲ್ಲಿ ವಿನಾಶ ಮೆರೆಯುವ ವ್ಯಕ್ತಿಗಳಾಗಲಿ, ಗುಂಪುಗಳಾಗಲಿ ಯಾವುದೇ ಧರ್ಮದ ಪ್ರತಿನಿಧಿಗಳಾಗಿರಲು ಸಾಧ್ಯವಿಲ್ಲ. ಅವರು ಎಲ್ಲ ಧರ್ಮ ಮತ್ತು ಸಮಾಜಗಳ ಪಾಲಿನ ಸಮಾನ ದ್ರೋಹಿಗಳು. ಅವರನ್ನು ಯಾವುದಾದರೂ ಧರ್ಮ ಅಥವಾ ಸಮಾಜದ ಜೊತೆ ಜೋಡಿಸುವ ತಪ್ಪನ್ನು ಯಾರೂ ಮಾಡಬಾರದು ಎಂದು ವಿದ್ವಾಂಸರು ಮನವಿ ಮಾಡಿದ್ದಾರೆ.

ಈ ಸಂದರ್ಭ ಅಖಿಲ ಭಾರತ ಉಲಮಾ ಮತ್ತು ಮಷಾಯಿಕ್ ಬೋರ್ಡ್, ಕರ್ನಾಟಕ ಘಟಕ ಅಧ್ಯಕ್ಷ ಸಯ್ಯದ್ ತನ್ವಿರ್ ಪೀರಾನ್ ಹಾಶ್ಮಿ ಬಿಜಾಪುರ, ಜಮಿಯ್ಯತುಲ್ ಉಲಮಾ ಕರ್ನಾಟಕ ಅಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸಿಮಿ, ಮಸ್ಜಿದೆ ನೂರ್ ಯತೀಮ್ ಖಾನಾದ ಇಮಾಮ್ ಮತ್ತು ಖತೀಬ್ ಸಗೀರ್ ಅಹ್ಮದ್ ಷರೀಫ್ ನದ್ವಿ ಖಾಸಿಮಿ, ಜಾಮಿಯಾ ಮುಹಮ್ಮದ್ ಅಹ್ಮದ್ ಇದರ ಸ್ಥಾಪಕರು ಮತ್ತು ಮೇಲ್ವಿಚಾರಕರಾದ ಮುಫ್ತಿ ಶಂಸುದ್ದೀನ್ ಬಜಾಲಿ ಸಾಹೇಬ್, ಜಾಮಿಯಾ ಮಸ್ಜಿದ್ ಸಿಟಿ ಮಾರ್ಕೆಟ್ ಖತೀಬ್ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ, ಜಾಮಿಯಾ ಇಸ್ಲಾಮಿಯ ಮಸೀಹುಲ್ ಉಲೂಮ್ ಇದರ ಸ್ಥಾಪಕರು ಮತ್ತು ಮೇಲ್ವಿಚಾರಕರಾದ ಮುಫ್ತಿ ಶುಐಬಲ್ಲ ಖಾನ್ ಮಿಫ್ತಾಹಿ, ಮದ್ರಸ ಇಸ್ಲಾಹುಲ್ ಬನಾತ್ ಇದರ ಮೇಲ್ವಿಚಾರಕರಾದ ಮೌಲಾನಾ ಶಬ್ಬೀರ್ ಅಹ್ಮದ್ ಹುಸೈನಿ ನದ್ವಿ, ಜಾಮಿಯಾ ಗೈಸುಲ್ ಹುದಾ ಶಿಕಾರಿ ಪಾಳ್ಯದ ಮೌಲಾನಾ ಮುಫ್ತಿ ಮುಹಮ್ಮದ್ ಅಸ್ಲಮ್ ಸಾಹೇಬ್ ರಶಾದಿ ಖಾಸಿಮಿ, ಮತ್ತು ಮೌಲಾನಾ ಸಯ್ಯದ್ ಅಬುಲ್ ಹಸನ್ ಅಲಿ ನದ್ವಿ ಅಕಾಡೆಮಿ, ಭಟ್ಕಳ ಇದರ ಸಂಚಾಲಕರಾದ ಮೌಲಾನಾ ಇಲ್ಯಾಸ್ ನದ್ವಿ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News