ಎ.ಪಿ.ಕಾರಂತರು ಕಲಾವಿದರ ಹಸಿವನ್ನು ನೀಗಿಸಿದ ಅನ್ನದಾತ: ಶಶಿಧರ್ ಕೋಟೆ

Update: 2019-02-17 17:09 GMT

ಬೆಂಗಳೂರು, ಫೆ.17: ರವೀಂದ್ರ ಕಲಾಕ್ಷೇತ್ರದಲ್ಲಿ ಕಳೆದ 35 ವರ್ಷಗಳಿಂದ ಕ್ಯಾಂಟೀನ್ ನಡೆಸುತ್ತಾ ಕಲಾವಿದರ ಹಸಿವನ್ನು ನೀಗಿಸುತ್ತಿರುವ ಎ.ಪಿ.ಕಾರಂತರನ್ನು ಸನ್ಮಾನಿಸಲಾಯಿತು.

ರವಿವಾರ ಸಂಪಾಜೆ ರಂಗ ಸಂಗಮ ಸಂಸ್ಥೆಯ ನೇತೃತ್ವದಲ್ಲಿ ರಂಗಭೂಮಿ ಕಲಾವಿದರು ಎ.ಪಿ.ಕಾರಂತರಿಗೆ 60 ವರ್ಷದ ತುಂಬಿದ ಹಿನ್ನೆಲೆಯಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಎ.ಪಿ.ಕಾರಂತರು ಹಾಗೂ ಅವರ ಕ್ಯಾಂಟೀನ್ ಜೊತೆಗೆ ಕಳೆದ 35 ವರ್ಷಗಳ ನಂಟನ್ನು ರಂಗಭೂಮಿ ಕಲಾವಿದರ ಹಂಚಿಕೊಂಡರು.

ಹಿರಿಯ ಗಾಯಕ ಶಶಿಧರ್ ಕೋಟೆ ಮಾತನಾಡಿ, ರವೀಂದ್ರ ಕಲಾಕ್ಷೇತ್ರದಲ್ಲಿ ಕಳೆದ 35ವರ್ಷಗಳಿಂದ ಕ್ಯಾಂಟೀನ್ ನಡೆಸುತ್ತಿರುವ ಎ.ಪಿ.ಕಾರಂತರು ಎಲ್ಲ ಕಲಾವಿದರಿಗೂ ಅಚ್ಚುಮೆಚ್ಚು. ಅವರ 35ವರ್ಷಗಳ ಕ್ಯಾಂಟೀನ್ ಜೀವನದಲ್ಲಿ ಸಾವಿರಾರು ಕಲಾವಿದರ ಹಸಿವನ್ನು ನೀಗಿಸಿದ್ದಾರೆ ಎಂದು ತಿಳಿಸಿದರು.

ಎ.ಪಿ.ಕಾರಂತರು ತಮ್ಮ ಜೀವನವನ್ನು ಕೇವಲ ಕ್ಯಾಂಟೀನ್ ನಡೆಸುವುದಕ್ಕೆ ಮಾತ್ರ ಸೀಮಿತಗೊಳಿಸಲಿಲ್ಲ. ಯಕ್ಷಗಾನ ಸೇರಿದಂತೆ ಹಲವಾರು ನಾಟಕಗಳನ್ನು ಆಯೋಜಿಸಿ, ಕಲಾವಿದರಿಗೆ ಆಸರೆಯಾಗಿದ್ದಾರೆ. ಇವತ್ತು ಅವರಿಗೆ 60ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸುತ್ತಿರುವುದು ಶ್ಲಾಘನೀಯವಾದದ್ದೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಎ.ಪಿ.ಕಾರಂತ ಮಾತನಾಡಿ, ನಾನು 25ವರ್ಷದ ತರುಣನಾಗಿದ್ದಾಗ ರವೀಂದ್ರ ಕಲಾಕ್ಷೇತ್ರದ ಬದಿಯೊಂದರಲ್ಲಿ ಪೆಟ್ಟಿ ಅಂಗಡಿಯನ್ನಿಟ್ಟು ಕ್ಯಾಂಟೀನ್ ಆರಂಭಿಸಿದೆ. ಕಲಾವಿದರ ನೋವು, ನಲಿವುಗಳನ್ನು ಕಣ್ಣಾರೆ ನೋಡಿ, ಹಲವರ ಹಸಿವನ್ನು ನೀಗಿಸಿದ್ದೇನೆಂಬ ತೃಪ್ತಿಯಿದೆ ಎಂದು ತಿಳಿಸಿದರು.

ಬಹುಭಾಷಾ ನಟ ಪ್ರಕಾಶ್ ರೈ, ಮಾಜಿ ಸಚಿವ ಉಮಾಶ್ರೀ, ಕಲಾವಿದ ಮುಖ್ಯಮಂತ್ರಿ ಚಂದ್ರು ಮೊದಲುಗೊಂಡ ಸಾವಿರಾರು ಕಲಾವಿದರನ್ನು ಹತ್ತಿರದಿಂದ ನೋಡಿದ್ದೇನೆ. ಇವತ್ತು ಅವರು ಬಹು ಎತ್ತರಕ್ಕೆ ಬೆಳೆದಿರುವುದನ್ನು ನೋಡಿ ಖುಷಿ ಆಗುತ್ತದೆ. ಹೀಗೆ ಕಲಾವಿದರು ಚೆನ್ನಾಗಿ ಬೆಳೆಯಬೇಕೆಂಬುದು ನನ್ನಾಸೆಯೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ತುಳುವೆರೆ ಚಾವಡಿ ಗೌರವ ಅಧ್ಯಕ್ಷ ಪುರುಷೋತ್ತಮ ಚೇಂಡ್ಲ, ಬರಹಗಾರ ಬ.ಲ.ಸುರೇಶ್, ಉದ್ಯಮಿ ಕುತ್ಯಾರು ರಾಜೇಶ್ ಶೆಟ್ಟಿ, ಸಂಪಾಜೆ ರಂಗ ಸಂಗಮದ ರಾಜ್ ಸಂಪಾಜೆ, ಕಲಾವಿದ ರಾಮಚಂದ್ರ ಮತ್ತಿತರರು ಉಪಸ್ಥಿತಿರಿದ್ದರು. ಸಭಾ ಕಾರ್ಯಕ್ರಮದ ನಂತರ ಪಾಂಡುನ ಅಲಕ್ಕ ಪೋಂಡು ತುಳು ಹಾಸ್ಯಮಯ ನಾಟಕ ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News