ಸಮಾಜದ ಸುಧಾರಣೆಗಾಗಿ ಬದುಕನ್ನು ಮೀಸಲಿಟ್ಟವರು ಹರಿದಾಸರು: ಸಾಹಿತಿ ಡಾ.ಅನುಸೂಯಾದೇವಿ

Update: 2019-02-17 17:13 GMT

ಬೆಂಗಳೂರು, ಫೆ.17: ಅಪರೂಪದ ಕೀತರ್ನೆಗಳ ಮೂಲಕ ಹರಿದಾಸರು ಸಾಹಿತ್ಯ ಲೋಕಕ್ಕೆ ಅಪಾರವಾದ ಸಂದೇಶ ನೀಡಿದ್ದಾರೆ. ಸಮಾಜ ಸುಧಾರಣೆಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟಿದ್ದಾರೆ ಎಂದು ಸಾಹಿತಿ ಡಾ.ಅನುಸೂಯಾದೇವಿ ಹೇಳಿದರು.

ರವಿವಾರ ನಗರದ ತರಳಬಾಳು ಕೇಂದ್ರದಲ್ಲಿ ಶಿವರಾಮ ಕಾರಂತ ವೇದಿಕೆ ಹಾಗೂ ತರಳಬಾಳು ಕೇಂದ್ರದಿಂದ ಆಯೋಜಿಸಿದ್ದ ‘ಮಾನವ ಕುಲಕ್ಕೆ ಹರಿದಾಸರ ಸಂದೇಶ’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಹಿತ್ಯದ ಮೂಲಕ ಸಮಾಜದ ಬದಲಾವಣೆಗಾಗಿ ಶ್ರಮಿಸಿದ್ದಾರೆ. ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಬಿತ್ತುವ ಮೂಲಕ ಯುವಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ ಎಂದು ನುಡಿದರು.

ನರಹರಿತೀರ್ಥರು, ಶ್ರೀಪಾದರಾಯರು, ವ್ಯಾಸತೀರ್ಥರು ಸೇರಿದಂತೆ ಪುರಂದರದಾಸರು, ಕನಕದಾಸರು, ವಿಜಯದಾಸರು, ಹೆಳವನಕಟ್ಟೆ ಗಿರಿಯಮ್ಮ, ಮೋಹನದಾಸರು ಸೇರಿದಂತೆ ಅನೇಕರು ಸಮಾಜವನ್ನು ಸರಿದಾರಿಯಲ್ಲಿ ನಡೆಸಿಕೊಂಡು ಹೋದವರಾಗಿದ್ದಾರೆ. ಹರಿದಾಸರ ಭಕ್ತಿ ಚಳವಳಿಯು ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಒಂದು ಮಹತ್ವದ ತಿರುವು ನೀಡಿತ್ತು ಎಂದು ಅವರು ಹೇಳಿದರು.

ಹರಿದಾಸರಲ್ಲಿ ಅಪರೂಪದ ಹಾಗೂ ಹೆಚ್ಚು ಪ್ರಚಲಿತರಾದ ಪುರಂದರ ದಾಸರ ಪದಗಳು ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾಗಿವೆ. ಶಾಸ್ತ್ರೀಯ ಸಂಗೀತವನ್ನು ಸಾಮಾನ್ಯರಿಗೂ ಪರಿಚಯ ಮಾಡಿಸಿಕೊಡಲು ಯತ್ನಿಸಿದ್ದರು. ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿಕೊಡುವ ಬಗೆಗೆ ಯೋಚಿಸಿದ್ದರು. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲಿಯೇ ವಿಶಿಷ್ಟವಾದ ಸ್ಥಾನ ಪಡೆದು ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎಂದು ಅವರು ತಿಳಿಸಿದರು.

ಜನಪ್ರಿಯ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಪ್ರಮುಖರಾಗಿದ್ದಾರೆ. ದಾಸ ಪರಂಪರೆಯಲ್ಲಿ ಬರುವ ಎಲ್ಲ ದಾಸರಿಗಿಂತ ಶೂದ್ರ ಪರಂಪರೆಯ ದಾಸರು ಇವರಾಗಿದ್ದಾರೆ. ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆ ನೀಡಿದ್ದಾರೆ ಎಂದ ಅವರು, ಇದೇ ರೀತಿಯಲ್ಲಿ ದಾಸ ಪರಂಪರೆಯಲ್ಲಿ ಅನೇಕರು ಮಾನವನ ಅನುಸರಿಸಬೇಕಾದ ಮಾರ್ಗಗಳ ಕುರಿತು ಹಾಗೂ ಮಾನವ ಜನಾಂಗದ ಹಲವಾರು ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಡಾ.ನಿರ್ಮಲಪ್ರಭು ವಹಿಸಿದ್ದರು. ಡಾ.ದೀಪಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದ್ದು, ಶಿವರಾಮ ಕಾರಂತ ವೇದಿಕೆ ಕಾರ್ಯದರ್ಶಿ ಡಾ.ಚಂದ್ರಶೇಖರ ಚಡಗ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News