ಬೆಂಗಳೂರಿನ ಸಾವಿರಕ್ಕೂ ಅಧಿಕ ಶಾಲೆಗಳಿಗಿಲ್ಲ ಸಿಸಿಟಿವಿ !

Update: 2019-02-17 17:45 GMT

ಬೆಂಗಳೂರು, ಫೆ.17: ಎಲ್ಲ ಸರಕಾರಿ ಶಾಲೆಗಳಲ್ಲೂ ಸಿಸಿಟವಿಗಳನ್ನು ಆದ್ಯತೆ ಮೇರೆಗೆ ಅಳವಡಿಸುವುದಾಗಿ ರಾಜ್ಯ ಸರಕಾರ ಘೋಷಿಸಿ ಒಂದು ವರ್ಷ ಕಳೆದರೂ ಬೆಂಗಳೂರಿನ 1,151 ಸರಕಾರಿ ಶಾಲೆಗಳ ಪೈಕಿ ಒಂದರಲ್ಲೂ ಸಿಸಿಟಿವಿ ಅಳವಡಿಕೆಯಾಗಿಲ್ಲ.

ಮಕ್ಕಳ ಮೇಲಿನ ಅತ್ಯಾಚಾರ, ಲೈಂಗಿಕ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಕ್ರಮವಾಗಿ ಶಾಲೆಗಳಲ್ಲಿ ಸಿಸಿಟಿವಿ ಅಳವಡಿಸುವುದನ್ನು ಕೆಲವು ವರ್ಷಗಳ ಹಿಂದೆಯೇ ಕಡ್ಡಾಯಗೊಳಿಸಲಾಗಿದೆ. ಆದರೆ, ಈ ಕಡ್ಡಾಯ ಆದೇಶ ಕೇವಲ ಖಾಸಗಿ ಶಾಲೆಗಳಿಗೆ ಸೀಮಿತವಾಗಿದೆ. ಖಾಸಗಿ ಶಾಲೆಗಳಿಗೆ ಅಷ್ಟೇ ಸಿಸಿಟಿವಿ ಕಡ್ಡಾಯ ಎಂದು ಭಾವಿಸುವುದು ತಪ್ಪು ಗ್ರಹಿಕೆ. ಸರಕಾರಿ ಶಾಲೆಗಳಲ್ಲೂ ಎಷ್ಟೋ ಮಕ್ಕಳ ಮೇಲೆ ಹಿಂಸಾಚಾರ, ದುರ್ಬಳಕೆ ನಡೆಯುತ್ತಿವೆ. ಆದರೆ ವರದಿಯಾಗದೇ ಮುಚ್ಚಿ ಹೋಗುತ್ತವೆ’ ಎಂದು ಆರ್‌ಟಿಇ ಕಾರ್ಯಪಡೆಯ ಸಂಚಾಲಕ ನಾಗಸಿಂಹ ಜಿ ರಾವ್ ಹೇಳುತ್ತಾರೆ. 

ಖಾಸಗಿ ಶಾಲೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರಲು ಪೋಷಕರ ಜಾಗೃತಿ ಹಾಗೂ ಹೋರಾಟವೇ ಕಾರಣ. ಆದರೆ ಮಕ್ಕಳು ಎಷ್ಟೋ ಬಾರಿ ಭಯದಿಂದ ಇಂತಹ ವಿಷಯಗಳನ್ನು ಬಹಿರಂಗಪಡಿಸುವುದೇ ಇಲ್ಲ. ಸರಕಾರಿ ಶಾಲೆಗಳಲ್ಲಿ ಮಕ್ಕಳಾಗಲಿ, ಪೋಷಕರಾಗಲಿ ಇಂತಹ ವಿಷಯಗಳ ಬಗ್ಗೆ ಹೋರಾಟ ನಡೆಸದೆ ಸುಮ್ಮನಿರುವುದೇ ಪ್ರಕರಣಗಳು ಮುಚ್ಚಿಹೋಗಲು ಕಾರಣ ಎಂದು ರಾವ್ ಅಭಿಪ್ರಾಯಪಟ್ಟಿದ್ದಾರೆ.

ರಾಜರಾಜೇಶ್ವರಿ ನಗರದ ಸರಕಾರಿ ಶಾಲೆಯಲ್ಲಿ 100ಕ್ಕೂ ಅಧಿಕ ಬಾಲಕ-ಬಾಲಕಿಯರು ಓದುತ್ತಿದ್ದಾರೆ. ಆದರೆ ಕ್ಯಾಂಪಸ್‌ನಲ್ಲಿ ಎಲ್ಲಿಯೂ ಸಿಸಿಟಿವಿ ಕ್ಯಾಮರಾ ಕಾಣಿಸುವುದಿಲ್ಲ. ಕಳೆದ ನವೆಂಬರ್‌ನಲ್ಲಿ ಶಿಕ್ಷಣ ಇಲಾಖೆ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಎರಡು ಸಿಸಿಟಿವಿ ಕ್ಯಾಮೆರಾ ಅಳವಡಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಅಳವಡಿಕೆಯಾಗಿಲ್ಲ ಎಂದು ಶಾಲೆಯ ಅಧ್ಯಾಪಕರೊಬ್ಬರು ತಿಳಿಸಿದರು. ಇನ್ನೊಂದು ಸರಕಾರಿ ಶಾಲೆಯಲ್ಲಿ 5ನೇ ತರಗತಿ ಬಾಲಕಿಯೊಬ್ಬಳು ಹಿರಿಯ ವಿದ್ಯಾರ್ಥಿಗಳ ಕಿರುಕುಳದ ಕಾರಣಕ್ಕೆ ಒಂದು ತಿಂಗಳಿನಿಂದ ಶಾಲೆಗೆ ಬರುವುದನ್ನೇ ನಿಲ್ಲಿಸಿದ್ದಳು. ನಮ್ಮ ದೈನಂದಿನ ದೈಹಿಕ ಶಿಕ್ಷಣದ ಅವಧಿಯಲ್ಲಿ ಹಿರಿಯ ಹುಡುಗನೊಬ್ಬ ನನ್ನ ಜಡೆ ಎಳೆದು ನನ್ನನ್ನು ಅಸಭ್ಯವಾಗಿ ಮುಟ್ಟುತ್ತಾನೆ. ನಾನು ಟೀಚರ್‌ಗೆ ದೂರು ಕೊಟ್ಟರೂ ಇದನ್ನು ದೊಡ್ಡ ವಿಷಯ ಮಾಡಬೇಡ ಎಂದು ಹೇಳಿದರು ಎಂದು ಬಾಲಕಿ ಹೇಳಿಕೊಂಡಿದ್ದಾರೆ.

ಹೀಗೆ ಅನೇಕ ಘಟನೆಗಳು ನಡೆಯುತ್ತಿದ್ದರೂ ಸರಕಾರ ನೀಡಿದ ಭರವಸೆಯನ್ನು ಈಡೇರಿಸಲು ಮುಂದಾಗಿಲ್ಲ. ಮಕ್ಕಳ ರಕ್ಷಣೆ ಸರಕಾರ ಮೊದಲ ಆದ್ಯತೆಯಾಗಿಲ್ಲ. ರಾಜಕೀಯ ಮಾಡುವುದು, ಹೊಡೆದಾಡುವುದು ಬಹಳ ಮುಖ್ಯವಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News