ರಾಜ್ಯದ ಯಾವುದೇ ನದಿ ನೀರು ಕುಡಿಯಲು ಯೋಗ್ಯವಲ್ಲ: ಕೆಎಸ್‌ಪಿಸಿಬಿ ಕಳವಳಕಾರಿ ವರದಿ

Update: 2019-02-17 17:50 GMT

ಬೆಂಗಳೂರು,ಫೆ.17: ಕರ್ನಾಟಕದ ಯಾವುದೇ ನದಿಯ ನೀರು ಸಾಂಪ್ರದಾಯಿಕ ಸಂಸ್ಕರಣೆಗೊಳಗಾಗದೆ ಕುಡಿಯಲು ಯೋಗ್ಯವಾಗಿಲ್ಲವೆಂಬುದನ್ನು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) 2018ರ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಿದ ನದಿ ವರ್ಗೀಕರಣ ದತ್ತಾಂಶ ವರದಿಯು ಬಹಿರಂಗಪಡಿಸಿದೆ.

ರಾಜ್ಯದ 19 ನದಿಗಳಿಂದ ಸಂಗ್ರಹಿಸಲಾದ 94 ಜಲಮಾದರಿಗಳ ಪೈಕಿ ಯಾವುದೂ ಕೂಡಾ ಕುಡಿಯಲು ಯೋಗ್ಯವೆಂಬುದನ್ನು ಸೂಚಿಸುವ ‘ಎ ’ವರ್ಗಕ್ಕೆ ಸೇರ್ಪಡೆಗೊಂಡಿಲ್ಲ. ನದಿಗಳ ನೀರಿನ 15 ಸ್ಯಾಂಪಲ್ ‌ಗಳು ‘ಡಿ’ದರ್ಜೆಗೆ ವರ್ಗೀಕರಿಸಲಾಗಿದೆ. ದಾವಣಗೆರೆಯ ಸಮೀಪ ಹರಿಯುವ ತುಂಗಭದ್ರಾ ಹಾಗೂ ಮಂಡ್ಯದ ಹೆಬ್ಬಾಳ ಕಣಿವೆಯಲ್ಲಿ ಹರಿಯುವ ಹೆಬ್ಬಾಳ ನದಿಯಿಂದ ಸಂಗ್ರಹಿಸಲಾದ ನೀರಿನ ಮಾದರಿಗಳನ್ನು ‘ಇ’ದರ್ಜೆಗೆ ವರ್ಗೀಕರಿಸಲಾಗಿದೆ. ರಾಜ್ಯದ ಪ್ರಮುಖ ನದಿ ಕಾವೇರಿಯ ನೀರಿಗೆ ‘ಸಿ’ ದರ್ಜೆ ದೊರೆತಿದೆ.

ಗೃಹ ಹಾಗೂ ಕೈಗಾರಿಕಾ ತ್ಯಾಜ್ಯಗಳನ್ನು ಚರಂಡಿಗಳ ಮೂಲಕ ನದಿಗಳಿಗೆ ವಿಸರ್ಜಿಸುತ್ತಿರುವುದು ರಾಜ್ಯದ ನದಿಗಳ ಗುಣಮಟ್ಟ ಹಾಳಾಗಲು ಮಖ್ಯ ಕಾರಣವೆಂದು ವರದಿ ಹೇಳಿದೆ.

ರಾಷ್ಟ್ರೀಯ ಜಲ ಗುಣಮಟ್ಟ ಕಣ್ಗಾವಲು ಕಾರ್ಯಕ್ರಮ (ಎನ್‌ಡಬ್ಲುಎಂಪಿ)ದಡಿಕ 19 ನದಿಗಳ ನೀರಿನ ಗುಣಮಟ್ಟವನ್ನು ಮಾಸಿಕವಾದ ಆಧಾರದಲ್ಲಿ ಪರಿಶೀಲಿಸಲಾಗಿತ್ತು. ಕೆಎಸ್‌ಪಿಸಿಬಿಯ ಸಹಯೋಗದೊಂದಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಈ ತಪಾಸಣೆಯನ್ನು ನಡೆಸಿತ್ತು. 19 ಭೌತ-ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾ ಅಂಶಗಳು ಸೇರಿದಂತೆ ಈ ನದಿ ನೀರಿನ ಮಾದರಿಗಳನ್ನು 28 ಮಾನದಂಡಗಳ ಅಡಿ ವಿಶ್ಲೇಷಣೆಗೊಳಪಡಿಸಲಾಗಿತ್ತು. ಇದರ ಜೊತೆಗೆ ಲೋಹಗಳಿಗೆ ಸಂಬಂಧಿಸಿದ ಎಂಟು ಮಾನದಂಡಗಳು ಹಾಗೂ ಕೀಟನಾಶಕಗಳಿಗೆ ಸಂಬಂಧಿಸಿದ 15 ಮಾನದಂಡಗಳಡಿ ಈ ನದಿ ನೀರನ್ನು ವರ್ಷಕ್ಕೆ ಒಂದು ಬಾರಿ ವಿಶ್ಲೇಷಿಸಲಾಗುತ್ತಿದೆ.

ರಾಜ್ಯದಲ್ಲಿ ಜಲ ಗುಣಮಟ್ಟ ಕಣ್ಗಾವಲು ಜಾಲವು, ಜಾಗತಿಕ ಪರಿಸರ ಕಣ್ಗಾವಲು ವ್ಯವಸ್ಥೆ ಹಾಗೂ ಭಾರತೀಯ ರಾಷ್ಟ್ರೀಯ ಜಲ ಸಂಪನ್ಮೂಲ ಕಣ್ಗಾವಲು ವ್ಯವಸ್ಥೆ ಹೀಗೆ ಎರಡು ಕಾರ್ಯಕ್ರಮಗಳಡಿ ಕಾರ್ಯಾಚರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News