ಮತ್ತೊಬ್ಬರಿಗೆ ಸಹಾಯ ಮಾಡದಿದ್ದರೆ ಬದುಕಿದ್ದು ಸತ್ತಂತೆ: ನಿವೃತ್ತ ನ್ಯಾ.ಶಿವರಾಜ್ ಪಾಟೀಲ್

Update: 2019-02-17 17:59 GMT

ಬೆಂಗಳೂರು, ಫೆ 17: ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣವಿದ್ದರೆ, ಬಡವರು ಹಾಗೂ ದಮನಿತರಿಗೆ ಕೈಲಾದಷ್ಟು ನೆರವಾಗಬೇಕು. ಇಲ್ಲದಿದ್ದರೆ ಸಮಾಜದಲ್ಲಿ ನಾವೂ ಬದುಕಿದ್ದು ಸತ್ತಂತೆ ಎಂದು ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಇಲ್ಲಿನ ಗಾಂಧಿನಗರದಲ್ಲಿ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಪ್ರತಿಷ್ಠಾನ ಟ್ರಸ್ಟ್‌ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಇತರರಿಗೆ ನೆರವಾಗುವ ಧನ್ಯತಾ ಭಾವವನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅದನ್ನು ಅನುಭವಿಸಿಯೆ ತಿಳಿಯಬೇಕು ಎಂದರು.

ಶ್ರೀಮಂತನಾಗಬೇಕಾದರೆ ಹಣ ಮಾಡಬೇಕಿಲ್ಲ. ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಿದರೆ ಅದೇ ಜೀವನದ ದೊಡ್ಡ ಆಸ್ತಿ. ಆಡುವ ಮಾತಿನಲ್ಲಿ ಬದ್ಧತೆ ಹಾಗೂ ಸತ್ಯಾಂಶವಿರಬೇಕು ಎಂದ ಅವರು, ಈ ದೇಶದಲ್ಲಿ ಭಾಷಣ, ಘೋಷಣೆಗಳ ಕೊರತೆ ಇಲ್ಲ. ಆದರೆ, ಅದರ ಅನುಷ್ಠಾನದ ಕೊರತೆ ಇದೆ ಎಂದರು.

ನಾನು ಕಾಯಕ ದಾಸೋಹ, ಶರಣರ ವಚನ ಹಾಗೂ ಸ್ವಾಮಿ ವಿವೇಕಾನಂದರ ವಾಣಿಯಿಂದ ಹೆಚ್ಚು ಪ್ರಭಾವಿತನಾದವನು. ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಪ್ರತಿ ಜಿಲ್ಲೆ ಹಾಗೂ ಹತ್ತಿರದ ಹೋಬಳಿಯಲ್ಲಿ ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಇದೇ ವೇಳೆ ಶಿವರಾಜ್ ಪಾಟೀಲ್ ಅವರ 4 ಕೃತಿಗಳನ್ನು ಬಿಡುಗಡೆಗೊಳಿಸಿದರು. ಸಂಸ್ಥೆಯ ಅಧ್ಯಕ್ಷ ಶೇಖರ್‌ಗೌಡ ಪಾಟೀಲ್, ಎಸ್.ಜಿ.ಪಲ್ಲೆದ್, ಅಡ್ವೊಕೇಟ್ ಜನರಲ್ ಉದಹೊಳ್ಳ, ನ್ಯಾಯವಾದಿ ಬಸವರಾಜ್ ಹುಡೇದ್, ನಿವೃತ್ತ ನ್ಯಾ. ಸುಭಾಷ್ ಅಡಿ, ನ್ಯಾ.ಬಿ.ಎಸ್.ಪಾಟೀಲ್, ಐಎಎಸ್ ಅಧಿಕಾರಿ ಯಶ್ವಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News