ಮೆಸ್ಸಿ ಗೋಲು: ಬಾರ್ಸಿಲೋನಾಕ್ಕೆ ಜಯ

Update: 2019-02-17 18:37 GMT

ಬಾರ್ಸಿಲೋನಾ, ಫೆ.17: ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ತಾರಾ ಆಟಗಾರ ಲಿಯೊನೆಲ್ ಮೆಸ್ಸಿ ಬಾರ್ಸಿಲೋನಾ ತಂಡಕ್ಕೆ ರಿಯಲ್ ವೆಲ್ಲಾಡೊಲಿಡ್ ತಂಡದ ವಿರುದ್ಧ 1-0 ಅಂತರದ ಗೆಲುವು ತಂದುಕೊಟ್ಟಿದ್ದಾರೆ. ಆ ಮೂಲಕ ಬಾರ್ಸಿಲೋನಾ ತಂಡ ಲಾ ಲಿಗಾ ಟೂರ್ನಿಯ ಅಂಕಪಟ್ಟಿಯಲ್ಲಿ 7 ಅಂಕಗಳ ಮುನ್ನಡೆ ಸಾಧಿಸಿ ಅಗ್ರಸ್ಥಾನದಲ್ಲಿದೆ. ಬಾರ್ಸಿಲೋನಾ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡದಿದ್ದರೂ ಪ್ರವಾಸಿ ತಂಡದ ವಿರುದ್ಧ ಸಮಸ್ಯೆ ಎದುರಿಸಲಿಲ್ಲ. ಭದ್ರ ರಕ್ಷಣಾ ವಿಭಾಗವನ್ನು ಹೊಂದಿದ್ದ ವೆಲ್ಲಾಡೊಲಿಡ್ ತಂಡದ ಎದುರು ಗೋಲಿನ ಅವಕಾಶಗಳನ್ನು ಸೃಷ್ಟಿಸಲು ಬಾರ್ಸಿಲೋನಾ ಆರಂಭದಲ್ಲಿ ಪರದಾಡಿತು. ಇನ್ನೇನು ಪ್ರಥಮಾರ್ಧ ಮುಗಿಯುವ ಹಂತದಲ್ಲಿ 43ನೇ ನಿಮಿಷದಲ್ಲಿ ಗೆರಾಲ್ಡ್ ಪಿಕ್ ಅವರಿಂದ ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಾಗಿಸುವಲ್ಲಿ ಮೆಸ್ಸಿ ತಪ್ಪು ಮಾಡಲಿಲ್ಲ. ಇದು ಮೆಸ್ಸಿ ಅವರ ಈ ಋತುವಿನ 22ನೇ ಗೋಲಾಗಿದೆ. ಪಂದ್ಯದ ದ್ವಿತೀಯಾರ್ಧದ ಆರಂಭದಲ್ಲಿ ಮತ್ತೊಂದು ಗೋಲು ಅವಕಾಶವು ಮೆಸ್ಸಿಗೆ ದೊರೆತಿತ್ತು. ಆದರೆ ಬಾರ್ಸಿಲೋನಾದ ಮಾಜಿ ಗೋಲ್‌ಕೀಪರ್ ಹಾಗೂ ಹಾಲಿ ವೆಲ್ಲಾಡೊಲಿಡ್ ತಂಡದ ಜೊರ್ಡಿ ಮ್ಯಾಸಿಪ್ ಅದ್ಭುತ ಪ್ರಯತ್ನದ ಮೂಲಕ ಗೋಲು ತಡೆದು ಮಿಂಚಿದರು. ಬದಲಿ ಆಟಗಾರ ಫಿಲಿಪ್ ಕೌಟಿನೊ ಮಾಡಿದ ಫೌಲ್‌ನಿಂದಾಗಿ ಮತ್ತೊಂದು ಪೆನಾಲ್ಟಿ ಅವಕಾಶವು ಮೆಸ್ಸಿಗೆ ದೊರೆತಿತ್ತು. ಆದರೆ ಈ ಬಾರಿಯೂ ಮ್ಯಾಸಿಪ್ ಗೋಲು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News