‘ಟಿಆರ್ ಎಫ್’ನ ನಂಡೆ ಪೆಂಙಳ್ ಅಭಿಯಾನದ ಮೂಲಕ 182 ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ

Update: 2019-02-18 06:23 GMT

ಮಂಗಳೂರು, ಫೆ.17: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್(ಟಿಆರ್‌ಎಫ್) ‘ನಂಡೆ ಪೆಂಙಳ್’ ಅಭಿಯಾನದ ಮೂಲಕ ಕಳೆದ 2 ವರ್ಷಗಳಲ್ಲಿ 30 ವರ್ಷ ಪ್ರಾಯ ಮೀರಿದ 182 ಹೆಣ್ಣು ಮಕ್ಕಳ ವಿವಾಹ ನಡೆಸಿಕೊಟ್ಟು ಗಮನ ಸೆಳೆದಿದ್ದು, ಮಾರ್ಚ್‌ನಲ್ಲಿ ಮತ್ತೆ 8 ಜೋಡಿ ವಿವಾಹಕ್ಕೆ ಸಿದ್ಧತೆ ನಡೆಸಿದೆ.

2 ವರ್ಷಗಳ ಹಿಂದೆ 30 ವರ್ಷ ಪ್ರಾಯ ಮೀರಿದ 1 ಸಾವಿರ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುವ ಗುರಿ ಹೊಂದಿದ್ದ ಟಿಆರ್‌ಎಫ್, ಅದಕ್ಕಾಗಿ ‘ನಂಡೆ ಪೆಂಙಳ್’ ಎಂಬ ಅಭಿಯಾನವನ್ನೇ ಆರಂಭಿಸಿದೆ. ಈ ಅಭಿಯಾನ ಆರಂಭಿಸುವುದಕ್ಕಿಂತ ಮೊದಲು 2009ರಿಂದ 2016ರವರೆಗೆ ಟಿಆರ್‌ಎಫ್ ವತಿಯಿಂದ ಮೂವತ್ತು ವರ್ಷಕ್ಕಿಂತ ಪ್ರಾಯ ಮೀರಿದ 167 ಜೋಡಿಗಳ ವಿವಾಹ ನೆರವೇರಿಸಿತ್ತು. ಆ ಬಳಿಕ ಇದನ್ನೊಂದು ಆಂದೋಲನಾ ರೂಪದಲ್ಲಿ ಕೊಂಡೊಯ್ಯಲು ಮುಂದಾದ ಟಿಆರ್‌ಎಫ್ ಸಹೃದಯಿಗಳನ್ನು ಒಳಗೊಂಡ ‘ನಂಡೆ ಪೆಂಙಳ್’ ಸಮಿತಿ ರಚಿಸಿ ಅಭಿಯಾನ್ನೇ ಆರಂಭಿಸಿತ್ತು. ಅದರ ಫಲವಾಗಿ ಈವರಗೆ 182 ಜೋಡಿಗಳ ವಿವಾಹವು ನಡೆದಿದೆ. ಅದೂ ಯಾವುದೇ ಪ್ರಚಾರವಿಲ್ಲದೆ ವಧು-ವರರ ಮನೆಯಲ್ಲೇ ವಿವಾಹ ಕಾರ್ಯ ನಡೆಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ನಂಡೆ ಪೆಂಙಳ್ ಈವರೆಗೆ ನಡೆಸಿದ 182 ಜೋಡಿಗಳ ವಿವಾಹಗಳ ಪೈಕಿ ಮಂಗಳೂರಿನಲ್ಲಿ 80, ಬಂಟ್ವಾಳದಲ್ಲಿ 52, ಪುತ್ತೂರಿನಲ್ಲಿ 20, ಬೆಳ್ತಂಗಡಿಯಲ್ಲಿ 26, ಸುಳ್ಯದಲ್ಲಿ 4 ಜೋಡಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಆ ಪೈಕಿ 30ರಿಂದ 33 ವರ್ಷದೊಳಗಿನ 130, 34ರಿಂದ 36 ವರ್ಷದೊಳಗಿನ 32, 37ರಿಂದ 40 ವರ್ಷದೊಳಗಿನ 13 ಹಾಗೂ 40 ವರ್ಷ ಮೇಲ್ಪಟ್ಟ 7 ಮಂದಿ ಮದುವೆ ನಡೆದಿದ್ದು ಗಮನಾರ್ಹ. ಟಿಆರ್‌ಎಫ್ 2 ವರ್ಷದ ಹಿಂದೆ ಈ ಯೋಜನೆ ಆರಂಭಿಸುವಾಗ 30 ವರ್ಷ ಪ್ರಾಯದ 1 ಸಾವಿರ ಹೆಣ್ಣುಮಕ್ಕಳಿಗೆ ವಿವಾಹ ನಡೆಸುವ ಗುರಿಯನ್ನಿಟ್ಟುಕೊಂಡಿತ್ತು. ಕಚೇರಿಗೆ ದಿನಂಪ್ರತಿ 30 ವರ್ಷ ಪ್ರಾಯ ಮೀರಿದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಅರ್ಜಿ ಬರುತ್ತಲೇ ಇದೆ. ಈ ಅರ್ಜಿಯನ್ನು ಅರ್ಹ ತಂಡವು ಪರಿಶೀಲನೆ ನಡೆಸಿದ ಬಳಿಕ ವಿವಾಹ ಕಾರ್ಯ ನಡೆಸಲಾಗುತ್ತದೆ. ಈಗಾಗಲೆ ಪ್ರಾಯ 30 ಮೀರಿದ 182 ಹೆಣ್ಣುಮಕ್ಕಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರೂ ಕೂಡ ಇನ್ನೂ ಹಲವರು ಮದುವೆಯ ಕನಸು ಕಾಣುತ್ತಿದ್ದಾರೆ. ಅರ್ಹ ಫಲಾನುಭವಿಗಳ ಕನಸನ್ನು ನನಸುಗೊಳಿಸಲು ಮುಂದಾಗಿರುವ ಟಿಆರ್‌ಎಫ್ ‘ನಂಡೆ ಪೆಂಙಳ್’ ಅಭಿಯಾನದಲ್ಲಿ ಸಹಭಾಗಿಗಳಾಗಲು ಅವಕಾಶ ಕಲ್ಪಿಸಲು ಮುಂದಾಗಿದ್ದು, 1 ಮದುವೆಯ ಫೂರ್ಣ ಖರ್ಚು (2 ಲಕ್ಷ ರೂ.), 5 ಪವನು ಚಿನ್ನಾಭರಣ (1.30ಲಕ್ಷ ರೂ.), 1 ಮದುವೆಯ ಅರ್ಧ ಖರ್ಚು (1 ಲಕ್ಷ ರೂ), 3 ಪವನ್ ಚಿನ್ನಾಭರಣ (80 ಸಾವಿರ ರೂ.), ಬಟ್ಟೆಬರೆ ಮತ್ತು ಊಟದ ಖರ್ಚು (50 ಸಾವಿರ ರೂ.), ಊಟದ ಖರ್ಚು (25 ಸಾವಿರ ರೂ.), ಮಾಸಿಕ ಸದಸ್ಯತನ (ತಲಾ 2 ಸಾವಿರ ರೂ. -1 ವರ್ಷದವರೆಗೆ), ಮಾಸಿಕ ಸದಸ್ಯತನ (ತಲಾ 1 ಸಾವಿರ ರೂ.-1 ವರ್ಷದವರೆಗೆ) ಅಥವಾ ನಿಮ್ಮ ಕೈಲಾದಷ್ಟು ಧನ ಸಹಾಯವನ್ನೂ ಕೂಡ ನೀಡಬಹುದಾಗಿದೆ.

‘ನಂಡೆ ಪೆಂಙಳ್’ ಅಭಿಯಾನದಿಂದ ದ.ಕ.ಜಿಲ್ಲಾದ್ಯಂತದ ಮಸೀದಿ, ಮೊಹಲ್ಲಾಗಳಲ್ಲಿ ಜಾಗೃತಿ ಮೂಡಿದ್ದು, ಸಮೀಕ್ಷೆ ಕಾರ್ಯ ನಡೆದಿದೆ. ಮಸೀದಿಯ ಆಡಳಿತ ಕಮಿಟಿ, ಇಮಾಮರು, ಜಮಾಅತರು, ಕುಟುಂಬಸ್ಥರು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ 30 ವರ್ಷ ಪ್ರಾಯ ಮೀರಿದ ಯುವತಿಯರ ವಿವಾಹಕ್ಕೆ ಪ್ರಯತ್ನ ನಡೆಯುತ್ತಿವೆ. ಅನೇಕ ಮಂದಿ ತನ್ನ ಅಥವಾ ತಮ್ಮ ಮಗಳ, ಸಹೋದರಿಯ, ಮದುವೆಯ ಸಂದರ್ಭ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಯುವತಿಯರ ಮದುವೆ ನಡೆಸಿಕೊಡುತ್ತಿದ್ದಾರೆ. ಅಷ್ಟೇ ಅಲ್ಲ, ಬಡ-ನಿರ್ಗತಿಕ-ಅನಾಥ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಎಂಬುದು ‘ಪೆಂಙಲೊ ಮಂಙಾಲ’ ಎಂದು ಪರಿವರ್ತನೆಯಾಗಿರುವುದು ಗಮನಾರ್ಹ.

ಆಸಕ್ತರು ‘ಆಸರೆ ವಿಮೆನ್ಸ್ ಫೌಂಡೇಶನ್ಸ್ (ರಿ) ಉಳಿತಾಯ ಖಾತೆ ಸಂಖ್ಯೆ :02392010027560, ಸಿಂಡಿಕೇಟ್ ಬ್ಯಾಂಕ್, ಎಫ್‌ಎಂಸಿಐ ಕಂಕನಾಡಿ ಬ್ರಾಂಚ್, ಐಎಫ್‌ಎಸ್‌ಸಿ ಸಂಖ್ಯೆ ಎಸ್‌ವೈಎನ್‌ಬಿ 0000239 ಅಥವಾ ವಿಶ್ವಾಸ್ ಕ್ರೌನ್, ಕೊಚಿನ್ ಬೇಕರಿ ಬಳಿ, ಕಂಕನಾಡಿ ಮಂಗಳೂರು-2, ದೂ.ಸಂ: 0824-4267883, ಮೊ.ಸಂ: 9742977616, 9844773906, 9591412400 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಮುಸ್ಲಿಮ್ ಸಮುದಾಯದ ಎಲ್ಲರೂ ಅದರಲ್ಲೂ ಪ್ರತಿಯೊಂದು ಜಮಾಅತ್‌ನ ಆಡಳಿತ ಕಮಿಟಿಯವರು ಜಮಾಅತ್ ವ್ಯಾಪ್ತಿಯಲ್ಲಿ ಈ ಬಗ್ಗೆ ಆಂದೋಲನ ರೂಪದ ಪ್ರಯತ್ನ ನಡೆಸಿದರೆ ಖಂಡಿತ ಇನ್ನೊಂದೆರಡು ವರ್ಷದಲ್ಲಿ 30 ವರ್ಷ ಪ್ರಾಯ ಮೀರಿಯೂ ಮದುವೆಯಾಗದ ಹೆಣ್ಣು ಮಕ್ಕಳು ದಾಂಪತ್ಯ ಜೀವನಕ್ಕೆ ಕಾಲಿಡುವಂತೆ ಮಾಡಬಹುದು. ಅದಲ್ಲದೆ ಪ್ರತಿಯೊಂದು ಕುಟುಂಬದವರೂ ತಮ್ಮ ಕುಟುಂಬದೊಳಗೆ ಸಮೀಕ್ಷೆ ನಡೆಸಿ ಸಾಮೂಹಿಕ ಪ್ರಯತ್ನದ ಮೂಲಕ ಹೆಣ್ಣು ಮಕ್ಕಳ ಕನಸು ನನಸು ಮಾಡಬಹುದು.

ಅಬ್ದುರ್ರವೂಫ್ ಪುತ್ತಿಗೆ

ಸ್ಥಾಪಕಾಧ್ಯಕ್ಷರು,

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್

ದ.ಕ.ಜಿಲ್ಲೆ ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ 30 ವರ್ಷ ಪ್ರಾಯ ಮೀರಿದ ಇನ್ನೂ ಅನೇಕ ಮಂದಿ ಹೆಣ್ಣುಮಕ್ಕಳು ಮದುವೆಯಾಗದೆ ಬಾಕಿಯುಳಿದಿದ್ದಾರೆ. ಸಂಘಟಿತ ಪ್ರಯತ್ನ ನಡೆಸಿದರೆ ಈ ಕಾರ್ಯವನ್ನು ಪೂರ್ತಿಗೊಳಿಸಬಹುದು. ಟಿಆರ್‌ಎಫ್‌ನೊಂದಿಗೆ ಇತರ ಸಮಾನ ಮನಸ್ಕರು ಕೂಡ ಕೈ ಜೋಡಿಸುವ ಅಗತ್ಯವಿದೆ. ಹಾಗಾದಲ್ಲಿ ಮಾತ್ರ ಈ ಸಮಸ್ಯೆಗೆ ಪರಿಹಾರ ಹುಡುಕಬಹುದು.

ರಿಯಾಝ್ ಕಣ್ಣೂರು

ಅಧ್ಯಕ್ಷರು,

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್

ಈವರೆಗೆ ‘ನಂಡೆ ಪೆಂಙಳ್’ ಅಭಿಯಾನದ ಮೂಲಕ 30 ವರ್ಷ ಪ್ರಾಯ ಮೀರಿದ 182 ಜೋಡಿಗಳ ವಿವಾಹಕ್ಕೆ ಸುಮಾರು 2 ಕೋಟಿ ರೂ. ವ್ಯಯಿಸಲಾಗಿದೆ. ಅಭಿಯಾನದ ಯಶಸ್ವ್ವಿಗಾಗಿ ಅಲ್ಲಲ್ಲಿ ‘ಕಾಣಿಕೆ ಡಬ್ಬ’, ಕೂಪನ್ ವಿತರಣೆ, ಸದಸ್ಯತ್ವ ಸ್ವೀಕಾರ ಇತ್ಯಾದಿ ರೂಪದಲ್ಲಿ ಹಣ ಸಂಗ್ರಹಿಸಿ ವಿನಿಯೋಗಿಸಿದ್ದೇವೆ. ಈ ಅಭಿಯಾನ ಮತ್ತಷ್ಟು ಯಶಸ್ವಿಯಾಗಲು ಎಲ್ಲರೂ ತನು, ಮನ, ಧನ ರೂಪದಲ್ಲಿ ಸಹಕಾರ ನೀಡಬೇಕಿದೆ.

ನೌಶಾದ್ ಹಾಜಿ ಸೂರಲ್ಪಾಡಿ

ಅಧ್ಯಕ್ಷರು

‘ನಂಡೆ ಪೆಂಙಳ್’ ಅಭಿಯಾನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News