ಪುಲ್ವಾಮ ಉಗ್ರರ ದಾಳಿ: ಬಿಜೆಪಿಯಿಂದ ರಾಜಕೀಯ ಲಾಭಕ್ಕಾಗಿ ಬಳಕೆ- ದಿನೇಶ್ ಗುಂಡೂರಾವ್ ಆರೋಪ

Update: 2019-02-18 13:19 GMT

ಬೆಂಗಳೂರು, ಫೆ. 18: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿನ ಉಗ್ರರರ ದಾಳಿಯನ್ನು ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ದಾಳಿ ಪ್ರಕರಣವನ್ನು ಮುಂದಿಟ್ಟುಕೊಂಡು ಮತಗಳನ್ನು ಹೇಗೆ ಗಳಿಸಬೇಕೆಂಬ ಉದ್ದೇಶ ಹೊಂದಿದ್ದಾರೆ. ಜತೆಗೆ ದಾಳಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ದೇಶದ ಭದ್ರತೆ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಈ ವಿಚಾರದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಾತುಗಳನ್ನು ಆಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದ ಅವರು, ಸರ್ಜಿಕಲ್ ಸ್ಟ್ರೈಕ್ ನಡೆಸಿ ಬಿಜೆಪಿ ಕೇವಲ ಪ್ರಚಾರ ಪಡೆದುಕೊಂಡರಷ್ಟೇ. ಇವರಿಂದ ಪಾಕಿಸ್ತಾನವನ್ನು ಮಟ್ಟ ಹಾಕಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು.

ಮೋದಿ ನೇತೃತ್ವದ ಸರಕಾರದ ಅವಧಿಯಲ್ಲೇ ಆತಂಕವಾದಿಗಳ ಆತಂಕ ಹೆಚ್ಚಾಗಿದೆ ಎಂದು ದೂರಿದ ದಿನೇಶ್ ಗುಂಡೂರಾವ್, ದೇಶದಲ್ಲಿರುವ ಪ್ರತಿಯೊಬ್ಬರೂ ದೇಶ ಪ್ರೇಮಿಗಳೇ. ಆದರೆ, ಬಿಜೆಪಿಯವರು ಮಾತೆತ್ತಿದರೆ ನಾವೇ ದೇಶ ಪ್ರೇಮಿಗಳು ಎಂದು ಬೊಗಳೆ ಬಿಡುತ್ತಿದ್ದಾರೆ. ದೇಶಪ್ರೇಮದ ಬಗ್ಗೆ ಯಾರೇ ಮಾತನಾಡಿದರೂ ಅವರನ್ನ ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಕೆಲ ಸಂಘಟನೆಗಳು ದೇಶಪ್ರೇಮವನ್ನ ಗುತ್ತಿಗೆಗೆ ತೆಗೆದುಕೊಂಡಂತೆ ವರ್ತಿಸುತ್ತಿವೆ. ಆ ಮೂಲಕ ದೇಶದಲ್ಲಿ ದ್ವೇಷದ ವಾತಾವರಣ ಮೂಡಿಸುತ್ತಿವೆ. ಇದು ಸರಿಯಾದ ಕ್ರಮವಲ್ಲ. ಉಗ್ರರ ದಾಳಿಯನ್ನು ರಾಜಕೀಯಕ್ಕಾಗಿ ಬಳಕೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News