2025 ರ ವೇಳೆಗೆ ಭಾರತದ ಔಷಧಿ ಉತ್ಪಾದನಾ ವ್ಯವಹಾರ 50 ಬಿಲಿಯನ್ ಡಾಲರ್ ಗಡಿ ದಾಟಲಿದೆ: ಸದಾನಂದ ಗೌಡ

Update: 2019-02-18 14:35 GMT

ಬೆಂಗಳೂರು, ಫೆ.18: 2025ರ ವೇಳೆಗೆ ಭಾರತದ ಔಷಧಿ ಉತ್ಪಾದನಾ ವ್ಯವಹಾರವು 50 ಬಿಲಿಯನ್ ಡಾಲರ್ ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಇಂಡಿಯಾ ಫಾರ್ಮಾ-2019 ಹಾಗೂ ಇಂಡಿಯಾ ಮೆಡಿಕಲ್ ಡಿವೈಸ್’ನ 4ನೇ ಅಂತರ್‌ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಮಾವೇಶವು ವಿಚಾರಗಳು, ನೂತನ ಉತ್ಪನ್ನಗಳು ಹಾಗೂ ತಂತ್ರಜ್ಞಾನದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಜಾಗತಿಕವಾಗಿ ಜನೌಷಧಿಗಳನ್ನು ಪೂರೈಕೆ ಮಾಡುವ ಅತೀದೊಡ್ಡ ದೇಶ ನಮ್ಮದು ಎಂದು ಸದಾನಂದಗೌಡ ಹೇಳಿದರು.

ವಿಶ್ವದಲ್ಲಿ ಬೇಡಿಕೆಯಿರುವ ಶೇ.50ರಷ್ಟು ವಿವಿಧ ಲಸಿಕೆಗಳು, ಅಮೆರಿಕದಲ್ಲಿ ಬೇಡಿಕೆಯಿರುವ ಶೇ.40ರಷ್ಟು ಜನೌಷಧಿ ಹಾಗೂ ಇಂಗ್ಲೆಂಡ್‌ನಲ್ಲಿನ ಶೇ.25ರಷ್ಟು ಎಲ್ಲ ಔಷಧಿಗಳನ್ನು ಭಾರತ ಪೂರೈಸುತ್ತಿದೆ ಎಂದು ಅವರು ತಿಳಿಸಿದರು.

ಅಮೆರಿಕ ಹಾಗೂ ಚೀನಾ ಮಾದರಿಯಲ್ಲಿ ಭಾರತವು ಅತೀ ವೇಗವಾಗಿ ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದೆ. ಅಮೆರಿಕ ಹಾಗೂ ಜರ್ಮನಿಯ ನಂತರ ಔಷಧ ವ್ಯವಹಾರದಲ್ಲಿ ಭಾರತ ನಂತರದ ಸ್ಥಾನದಲ್ಲಿದೆ. ವೈದ್ಯಕೀಯ ಉಪಕರಣಗಳು ಹಾಗೂ ಡಯಾಗ್ನಸ್ಟಿಕ್ಸ್‌ಗಳ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನವನ್ನು ಭಾರತ ಹೊಂದಿದೆ ಎಂದು ಸದಾನಂದಗೌಡ ಹೇಳಿದರು.

ಪ್ರಧಾನಿ ನರೇಂದ್ರಮೋದಿಯು ವಿವಿಧ ದೇಶಗಳೊಂದಿಗೆ ವ್ಯವಹಾರಗಳಿಗೆ ಉತ್ತೇಜನ ನೀಡಿದ್ದಾರೆ. ಮೇಕ್ ಇನ್ ಇಂಡಿಯಾ ಅಭಿಯಾನದಡಿಯಲ್ಲಿ ಉದ್ಯಮ, ವ್ಯವಹಾರಗಳು ಕ್ಷೀಪ್ರಗತಿಯಲ್ಲಿ ಮುನ್ನಡೆಯುತ್ತಿವೆ ಎಂದು ಅವರು ಹೇಳಿದರು.

ವೈದ್ಯಕೀಯ ಉಪಕರಣಗಳ ವಲಯಕ್ಕೆ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯ್ನನು ಆಕರ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ತೊಡಗಿವೆ ಎಂದು ಅವರು ಹೇಳಿದರು.

ಆಂಧ್ರಪ್ರದೇಶದಲ್ಲಿ 270 ಎಕರೆ ಪ್ರದೇಶದಲ್ಲಿ ಆಂಧ್ರಪ್ರದೇಶ ಮೆಡ್‌ಟೆಕ್ ವಲಯವನ್ನು ಸ್ಥಾಪಿಸಲಾಗಿದೆ. ಹಾಸನ ಮತ್ತು ಯಾದಗಿರಿಯಲ್ಲಿ ಫಾರ್ಮಾ ಪಾಕ್ ನಿರ್ಮಾಣ ಮಾಡಲಾಗಿದೆ. ಇದೇ ರೀತಿ ಬೆಂಗಳೂರು ಮತ್ತು ಮಂಗಳೂರಿನಲ್ಲೂ ಫಾರ್ಮಾ ಪಾರ್ಕ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಸದಾನಂದಗೌಡ ತಿಳಿಸಿದರು.

ಎರಡು ದಿನಗಳ ಕಾಲ ನಡೆಯಲಿರುವ ಈ ಸಮಾವೇಶದಲ್ಲಿ 50ಕ್ಕೂ ಹೆಚ್ಚು ದೇಶಗಳ 100ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಲಿವೆ. ಔಷಧ ಹಾಗೂ ವೈದ್ಯಕೀಯ ಉಪಕರಣಗಳ ವಲಯದಲ್ಲಿ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳಿದ್ದು, ಉದ್ಯಮಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಕೇಂದ್ರ ಸಚಿವ ಮನ್ಸುಕ್ ಮಂಡಾವಿಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News