ಬೆಂಗಳೂರು: ದ್ರಾಕ್ಷಿ-ಕಲ್ಲಂಗಡಿ ಮೇಳಕ್ಕೆ ಸಚಿವ ಶಿವಶಂಕರ ರೆಡ್ಡಿ ಚಾಲನೆ

Update: 2019-02-18 14:38 GMT

ಬೆಂಗಳೂರು, ಫೆ.18: ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ನಡೆಯುವ ದ್ರಾಕ್ಷಿ-ಕಲ್ಲಂಗಡಿ ಮೇಳಕ್ಕೆ ನಗರದ ಹಡ್ಸನ್ ವೃತ್ತದಲ್ಲಿರುವ ಸಂಸ್ಥೆಯ ಶೀತಲಗೃಹದ ಆವರಣದಲ್ಲಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಸೋಮವಾರ ಚಾಲನೆ ನೀಡಿದರು.

ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯುತ (ಹಾಪ್‌ಕಾಮ್ಸ್) ದ್ರಾಕ್ಷಿ ಹಾಗೂ ಕಲ್ಲಂಗಡಿ ಹಣ್ಣಿನ ಬೆಳೆಗಾರರನ್ನು ಪ್ರೋತ್ಸಾಹಿಸುವ ಹಾಗೂ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ದರದಲ್ಲಿ ಅವುಗಳನ್ನು ಒದಗಿಸುವ ಉದ್ದೇಶದಿಂದ ತನ್ನ ಮಳಿಗೆಗಳಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣು ಮಾರಾಟ ಮೇಳ ಹಮ್ಮಿಕೊಂಡಿದ್ದು, ಮಾರ್ಚ್ ಅಂತ್ಯದವರೆಗೂ ನಡೆಯಲಿದೆ. ವರ್ಷದ ಮೊದಲ ಋತುಮಾನದ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಬೆಂಗಳೂರಿನ ಗ್ರಾಹಕರಿಗೆ ತಲುಪಿಸಲು ಈ ಮೇಳ ಆಯೋಜಿಸಲಾಗಿದೆ.

ಮೇಳದ ಅಂಗವಾಗಿ ವಿಜಯಪುರ, ಬಾಗಲಕೋಟ, ಕೊಪ್ಪಳ, ಗದಗ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹೀಗೆ ನಾನಾ ಜಿಲ್ಲೆಗಳಿಂದ ದ್ರಾಕ್ಷಿ ಹಾಗೂ ಕಲ್ಲಂಗಡಿ ಹಣ್ಣುಗಳು ಆಗಮಿಸಿವೆ.

ದ್ರಾಕ್ಷಿ-ಕಲ್ಲಂಗಡಿ ಜತೆಗೆ ಇತರೆ ಸೀಸನಲ್ ಹಣ್ಣುಗಳು, ಒಣದ್ರಾಕ್ಷಿ ಮತ್ತಿತರ ಡ್ರೈ ಫ್ರೂಟ್ಸ್‌ಗಳೂ ಮಾರಾಟವಾಗಲಿವೆ. ನಗರದ ಎಲ್ಲ 275 ಮಳಿಗೆಗಳಲ್ಲಿ ಮತ್ತು ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮೇಳ ನಡೆಯಲಿದ್ದು, ಸೀಸನ್ ಮುಗಿಯುವವರೆಗೂ ಮುಂದುವರಿಯುತ್ತದೆ. ಮೇಳದಲ್ಲಿ ಶೇ.10ರಷ್ಟು ರಿಯಾಯಿತಿ ದರದಲ್ಲಿ ಹಣ್ಣುಗಳ ಮಾರಾಟ ವ್ಯವಸ್ಥೆಯಿರುತ್ತದೆ. ಒಂದೂವರೆ ತಿಂಗಳು ನಡೆಯುವ ಮೇಳದಲ್ಲಿ 500 ಟನ್ ದ್ರಾಕ್ಷಿ, 1,500 ಟನ್ ಕಲ್ಲಂಗಡಿ ಮಾರಾಟ ಮಾಡುವ ಗುರಿ ಹೊಂದಲಾಗಿದೆ.

ಎಲ್ಲೆಲ್ಲಿ ಮಾರಾಟ: ಹಡ್ಸನ್ ವೃತ್ತದಲ್ಲಿರುವ ಹಾಪ್‌ಕಾಮ್ಸ್ ಮಳಿಗೆ, ಹಾಪ್‌ಕಾಮ್ಸ್ ಪ್ರಧಾನ ಕಚೇರಿ ಆವರಣ, ಲಾಲ್‌ಬಾಗ್‌ನಲ್ಲಿ ಐದು ಮಳಿಗೆಗಳು ಹಾಗೂ ನಗರದ ಎಲ್ಲಾ ಬಡಾವಣೆಗಳಲ್ಲಿನ ಮಾರಾಟ ಮಳಿಗೆಗಳು, ಹೈಕೋರ್ಟ್ ಆವರಣ, ಎಂಎಸ್ ಬಿಲ್ಡಿಂಗ್, ಶಾಸಕರ ಭವನ ಸೇರಿದಂತೆ ಪ್ರಮುಖ ಸರಕಾರಿ ಕಚೇರಿ, ಅರೆ ಸರಕಾರಿ ಕಚೇರಿ, ವಿಪ್ರೊ ಮತ್ತಿತರ ಖಾಸಗಿ ಸಂಘ-ಸಂಸ್ಥೆಗಳ ಆವರಣ, ಕಾರ್ಖಾನೆಗಳ ಆವರಣ ಹಾಗೂ ಇತರೆ ಆಯ್ದ ಸ್ಥಳಗಳಲ್ಲಿ ಮಾರಾಟ ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಮೇಳದ ಅಂಗವಾಗಿ ಅಲ್ಲಲ್ಲಿ ಮೊಬೈಲ್ ವಾಹನಗಳಲ್ಲಿ ಸಂಚರಿಸುತ್ತಾ ಬೆಳಗ್ಗೆ 8.30 ರಿಂದ ಸಂಜೆ 5.30ರವರೆಗೆ ಮಾರಾಟ ವ್ಯವಸ್ಥೆ ಕೈಗೊಳ್ಳಲಾಗಿದೆ.

15ಕ್ಕೂ ಹೆಚ್ಚು ಬಗೆಯ ದ್ರಾಕ್ಷಿ: ಮಾರಾಟ ಮೇಳದಲ್ಲಿ ಶರದ್ ಸೀಡ್‌ಲೆಸ್, ಕೃಷ್ಣ ಶರದ್, ಥಾಮ್ಸನ್ ಸೀಡ್‌ಲೆಸ್, ಸೋನಿಕಾ, ತಾಜ್ ಗಣೇಶ್ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಬಗೆಯ ದ್ರಾಕ್ಷಿಗಳು, ನಾಮಧಾರಿ, ಕಿರಣ್ ಸೇರಿದಂತೆ 3-4 ಬಗೆಯ ಕಲ್ಲಂಗಡಿ ಹಣ್ಣುಗಳು ಮಾರಾಟವಾಗುತ್ತಿವೆ.

ಸಚಿವ ಶಿವಶಂಕರರೆಡ್ಡಿ ಮಾತನಾಡಿ, ರೈತರು ಮತ್ತು ಗ್ರಾಹಕರ ಹಿತ ಮುಖ್ಯವಾಗಿಟ್ಟುಕೊಂಡು ಜಿಲ್ಲೆ, ಪ್ರತಿ ತಾಲ್ಲೂಕು ವ್ಯಾಪ್ತಿಗಳಲ್ಲಿ ಇನ್ನಷ್ಟು ಹಾಪ್ ಕಾಮ್ಸ್ ಮಳಿಗೆ ತೆರೆಯಲು ಕ್ರಮವಸಲಾಗುವುದು ಎಂದು ತಿಳಿಸಿದರು.

ಹಾಪ್ ಕಾಮ್ಸ್ ಮಳಿಗೆ ಹೆಚ್ಚುವುದರಿಂದ ತೋಟಗಾರಿಕಾ ಬೆಳೆಗಾರರು, ರೈತರಿಗೆ ಹೆಚ್ಚಿನ ಲಾಭವಾಗಲಿದೆ. ನೇರವಾಗಿ ಹಾಪ್ ಕಾಮ್ಸ್ ಮಳಿಗೆಗಳಿಗೆ ಬೆಳೆದ ಹಣ್ಣು ತರಕಾರಿ ಮಾರಾಟ ಮಾಡಬಹುದಾಗಿದೆ. ಇನ್ನೊಂದೆಡೆ ಗ್ರಾಹಕರಿಗೆ ಕಡಿಮೆ ದರದಲ್ಲಿ ತಾಜಾ ಹಣ್ಣು ತರಕಾರಿ ಸಿಗಲಿವೆ ಎಂದ ಅವರು, ಹಡ್ಸನ್ ವೃತ್ತದಲ್ಲಿ ನೂತನ ವಾಗಿ ನಿರ್ಮಾಣ ಆಗುತ್ತೀರುವ ಹಾಪ್ ಕಾಮ್ಸ್ ಕಟ್ಟಡಕ್ಕೆ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಶಾಸಕ ರಾಮಲಿಂಗಾರೆಡ್ಡಿ, ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್, ಅಧ್ಯಕ್ಷ ಎ.ಎಸ್. ಚಂದ್ರೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ರಿಯಾಯಿತಿ ಮಾರಾಟ ದರ (ಕೆ.ಜಿ.ಗಳಲ್ಲಿ)

ದ್ರಾಕ್ಷಿ ಬೆಂಗಳೂರು ನೀಲಿ-36 ರೂ.

ದ್ರಾಕ್ಷಿ ಟಿ.ಎಸ್-70ರೂ.

ದ್ರಾಕ್ಷಿ ತಾಜ್ ಎ ಗಣೇಶ್-72ರೂ.

ದ್ರಾಕ್ಷಿ ಸೋನಾಕ-80 ರೂ.

ದ್ರಾಕ್ಷಿ ಶರದ್-82 ರೂ.

ದ್ರಾಕ್ಷಿ ಪ್ಲೆಮ್-100 ರೂ.

ಕೃಷ್ಣ ಶರದ್ ಸೂಪರ್ ದ್ರಾಕ್ಷಿ-148 ರೂ.

ದ್ರಾಕ್ಷಿ ಇಂಡಿಯನ್ ಬ್ಲಾಕ್/ ರೆಡ್ ಗ್ಲೋಬ್-140 ರೂ.

ಕೃಷ್ಣ ಶರದ್-90 ರೂ.

ಸೂಪರ್ ಸೋನಿಕ-90 ರೂ.

ಜಂಬೊ ದ್ರಾಕ್ಷಿ-175 ರೂ.

ಕಲ್ಲಂಗಡಿ ಕಿರಣ್-12 ರೂ.

ಕಲ್ಲಂಗಡಿ ನಾಮಧಾರಿ-16 ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News