ಬಿಬಿಎಂಪಿ ಬಜೆಟ್‌: 2300 ಕೋಟಿ ವೆಚ್ಚದಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿ

Update: 2019-02-18 14:55 GMT

ಬೆಂಗಳೂರು, ಫೆ.18: ರಾಜ್ಯ ಸರಕಾರ ಬಿಬಿಎಂಪಿ ವ್ಯಾಪ್ತಿಯ ಪ್ರದೇಶದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ನವ ಬೆಂಗಳೂರು ಯೋಜನೆ ಅಡಿಯಲ್ಲಿ 8015 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, 2019-20 ನೆ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಗೆ 2300 ಕೋಟಿ ನೀಡಲಾಗಿದೆ.

ಕ್ರಿಯಾ ಯೋಜನೆ ಅನುಷ್ಠಾನ: ರಸ್ತೆಗಳ ವೈಟ್ ಟಾಪಿಂಗ್‌ಗಾಗಿ 1172 ಕೋಟಿ, ಕೆರೆಗಳ ಅಭಿವೃದ್ಧಿಗಾಗಿ 348 ಕೋಟಿ ರೂ., ರಸ್ತೆಗಳ ಅಭಿವೃದ್ಧಿಗೆ 2246 ಕೋಟಿ, ಗ್ರೇಡ್ ಸಪರೇಟರ್‌ಗಳ ನಿರ್ಮಾಣಕ್ಕೆ 534.60 ಕೋಟಿ, ಬೃಹತ್ ಮಳೆ ನೀರುಗಾಲುವೆ ಅಭಿವೃದ್ಧಿಗಾಗಿ 1321.14 ಕೋಟಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿಗಾಗಿ 75 ಕೋಟಿ, 110 ಹಳ್ಳಿಗಳ ರಸ್ತೆಗಳ ಅಭಿವೃದ್ಧಿಗೆ 275 ಕೋಟಿ, ಐಟಿಪಿಎಲ್‌ಗೆ ಸಂಪರ್ಕಿಸುವ 14 ಪರ್ಯಾಯ ರಸ್ತೆಗಳ ಅಭಿವೃದ್ಧಿಗೆ 80 ಕೋಟಿ.

ಎನ್‌ಎಎಲ್-ವಿಂಡ್‌ಟನಲ್ ರಸ್ತೆ ನಿರ್ಮಾಣಕ್ಕೆ 65 ಕೋಟಿ, ಘನತಾಜ್ಯ ನಿರ್ವಹಣೆಗೆ 753 ಕೋಟಿ, ಕಟ್ಟಡ ಮತ್ತು ಆಸ್ಪತ್ರೆಗಳಿಗಾಗಿ 243 ಕೋಟಿ, ರಕ್ಷಣಾ ಇಲಾಖೆಯಿಂದ ಪಡೆದುಕೊಂಡ ಜಮೀನಿನಲ್ಲಿ ಅನುಷ್ಠಾನದ ಯೋಜನೆಗಳಿಗಾಗಿ 102 ಕೋಟಿ, ಯೋಜನೆಗಳ ಭೂ ಸ್ವಾಧೀನ ವೆಚ್ಚ 100 ಕೋಟಿ, ಬಿಡಿಎಯಿಂದ ಬಿಬಿಎಂಪಿಗೆ ವರ್ಗಾವಣೆಗೊಂಡಿರುವ ಯೋಜನೆಗಳಿಗಾಗಿ 195 ಕೋಟಿ ರಾಜ್ಯ ಸರಕಾರ ಘೋಷಣೆ ಮಾಡಿದೆ.

2019-20 ನೆ ಸಾಲಿನ ಬಜೆಟ್‌ನಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಗೆ 1 ಸಾವಿರ ಕೋಟಿ ಮೀಸಲಿಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಕ್ರಮ ಬದ್ಧವಾಗಿಸಲು 10 ಸಾವಿರ ವಾಹನಗಳ ನಿಲುಗಡೆಗೆ ಆಯ್ದ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹೆಬ್ಬಾಳ ಮತ್ತು ಕೆ.ಆರ್.ಪುರಂ ಫ್ಲೈ ಓವರ್‌ಗಳಲ್ಲಿ ಹೆಚ್ಚುವರಿ ಲೂಪ್ ನಿರ್ಮಾಣ ಮಾಡಲಾಗುವುದು ಹಾಗೂ ಗೊರಗುಂಟೆಪಾಳ್ಯದಲ್ಲಿ 195 ಕೋಟಿ ವೆಚ್ಚದಲ್ಲಿ ಹೊಸ ಅಂಡರ್ ಪಾಸ್ ನಿರ್ಮಿಸಲಾಗುವುದು ಎಂದು ಘೋಷಿಸಿದ್ದಾರೆ.

ವಾಸ್ತವಕ್ಕೆ ಹತ್ತಿರವಾದ, ಜನಪರ ಬಜೆಟ್ ಇದಾಗಿದೆ. ಎರಡು ತಿಂಗಳಿನಿಂದ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಮುಂದಿನ ಒಂದು ತಿಂಗಳೊಳಗೆ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗುವ ಭರವಸೆ ಇದೆ. ಅದರ ಜತೆಗೆ ವಿವಿಧ ಮೂಲಗಳಿಂದಲೂ ಹಣ ಸಂಗ್ರಹ ಮಾಡಲಾಗುತ್ತದೆ. ಈ ಬಾರಿಯ ಬಜೆಟ್‌ನಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ಮಂಡಿಸಲಾಗಿದೆ.

-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News