ಬಿಬಿಎಂಪಿ ಬಜೆಟ್ ಮಂಡನೆಗೆ ಪ್ರತಿಪಕ್ಷ ಬಿಜೆಪಿ ವಿರೋಧ

Update: 2019-02-18 15:41 GMT

ಬೆಂಗಳೂರು,ಫೆ.18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಡಳಿತ ಬೋಗಸ್ ಬಜೆಟ್ ಮಂಡಿಸಿ ಜನರನ್ನು ಮರಳು ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿಯ ಸದಸ್ಯರು ಬಜೆಟ್ ಮಂಡನೆಯುದ್ದಕ್ಕೂ ‘ಬೋಗಸ್ ಬಜೆಟ್’ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.

ಬಿಬಿಎಂಪಿಯ ಆದಾಯ 5 ಸಾವಿರ ಕೋಟಿಗಳಷ್ಟಿದ್ದರೆ ಆಡಳಿತ ಪಕ್ಷ 10 ಸಾವಿರ ಕೋಟಿ ರೂ. ಬಜೆಟ್ ಮಂಡಿಸುವ ಮೂಲಕ ನಾಗರಿಕರ ದಿಕ್ಕು ತಪ್ಪಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರವೇ ಹೆಚ್ಚಿನ ಅನುದಾನ ನೀಡುವ ಮೂಲಕ ತಾರತಮ್ಯ ಎಸಗಲಾಗಿದೆ ಎಂದು ದೂರಿದರು. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಅವರು ಬಜೆಟ್ ಮಂಡನೆ ಆರಂಭ ಮಾಡುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಎದ್ದು ನಿಂತು ಘೋಷಣೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯರು ಬಜೆಟ್ ಮಂಡನೆಗೆ ವಿರೋಧ ವ್ಯಕ್ತಪಡಿಸಿ ಧಿಕ್ಕಾರಗಳನ್ನು ಕೂಗುತ್ತಿದ್ದರೂ ಆ ಕಡೆಗೆ ಗಮನ ನೀಡದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಬಜೆಟ್ ಮಂಡಿಸಿದರು.

ಬಜೆಟ್ ಮಂಡಿಸುವುದಕ್ಕೂ ಮೊದಲು ಕಾಶ್ಮೀರ ಪುಲ್ವಾಮಾದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಶ್ರದ್ಧಾಂಜಲಿ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಪದ್ಮನಾಭರೆಡ್ಡಿ ಕೋರಿದರು. ಮೇಯರ್ ಮುಂದಿನ ಸಭೆಯಲ್ಲಿ ಅವಕಾಶ ನೀಡುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News