ಯುವಜನ ಆಯೋಗ ಸ್ಥಾಪನೆ ಕುರಿತು ಚರ್ಚೆ: ಸಚಿವ ರಹೀಂ ಖಾನ್

Update: 2019-02-18 16:19 GMT

ಬೆಂಗಳೂರು, ಫೆ.18: ರಾಜ್ಯ ಯುವಜನ ಆಯೋಗ ಸ್ಥಾಪನೆ ಸಂಬಂಧ ತ್ವರಿತವಾಗಿ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸುವುದಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ರಹೀಂ ಖಾನ್ ಇಂದಿಲ್ಲಿ ತಿಳಿಸಿದರು.

ಸೋಮವಾರ ನಗರದ ಪುರಭವನದ ಸಭಾಂಗಣದಲ್ಲಿ ರಾಜ್ಯ ಯುವ ಜನ ಆಯೋಗ ಆಂದೋಲನ ಸಮಿತಿ ಹಮ್ಮಿಕೊಂಡಿದ್ದ, ಯುವಜನ ಹಕ್ಕುಗಳ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯುವ ಪೀಳಿಗೆಗೆ ಆರೋಗ್ಯ, ಗುಣಮಟ್ಟದ ಶಿಕ್ಷಣ, ಉದ್ಯೋಗ ದೊರೆಯಬೇಕು ಸೇರಿದಂತೆ ನ್ಯಾಯಬದ್ಧ ಹಕ್ಕೊತ್ತಾಯಗಳಿಗೆ ನನ್ನ ಸಮ್ಮತ ಇದೆ. ಇದನ್ನೆಲ್ಲಾ ಒಳಗೊಂಡಂತೆ ಯುವಜನ ಆಯೋಗ ಸ್ಥಾಪಿಸುವ ವಿಚಾರವನ್ನು ಸರಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಅವರು ಭರವಸೆ ನೀಡಿದರು.

ನಮ್ಮ ದೇಶದಲ್ಲಿ ಶೇಕಡ 50 ರಷ್ಟು ಭಾಗ ಯುವ ಜನರಿದ್ದಾರೆ. ಅಷ್ಟೇ ಅಲ್ಲದೆ, ದೇಶದ ಭವಿಷ್ಯ ಯುವ ಜನರ ಕೈಯಲ್ಲಿ ಇದೆ. ಆದರೆ, ಇತ್ತೀಚಿಗೆ ಭಾಷೆ, ಜಾತಿ ಧರ್ಮದ ಹೆಸರಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಯುವ ಜನರ ಮನೋಸ್ಥಿತಿಯನ್ನು ಬದಲಾಯಿಸುತ್ತಾ ಅವರ ಒಗ್ಗಟ್ಟು ಮುರಿಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಯುವ ಮುನ್ನಡೆ ಸಂಚಾಲಕ ತಿಪ್ಪೇಸ್ವಾಮಿ ಮಾತನಾಡಿ, ಯುವ ಜನರಿಗೆ ಉದ್ಯೋಗ ಸೇರಿದಂತೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಹಕರಿಸಬೇಕಾದ ಸರಕಾರಗಳು ಇಂದು ಅಧಿಕಾರಕ್ಕೆ ಬಂದ ತಕ್ಷಣ ಯುವ ಜನರನ್ನು ಮರೆಯುತ್ತಿದ್ದಾರೆ ಎಂದು ಹೇಳಿದರು.

ಯುವಕರಿಗೆ ಬೇಕಾದ ಉತ್ತಮ ಶಿಕ್ಷಣ, ಶಿಕ್ಷಣಕ್ಕೆ ತಕ್ಕ ಉದ್ಯೊಗ ಇವುಗಳ ಮೂಲಕ ಆರ್ಥಿಕ ಭದ್ರತೆಯನ್ನು ಕಾಪಾಡಬೇಕಿರುವ ಸರಕಾರಗಳು ಸಂಪೂರ್ಣವಾಗಿ ಯುವಜನರನ್ನು ಮರೆತಿದ್ದು, ಇದರಿಂದ ಯುವಕರು ಬದುಕು ಕಟ್ಟಿಕೊಳ್ಳುವ ಕುರಿತು ಅಭದ್ರತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಯುವಕರನ್ನು ಅಭದ್ರತೆಯಿಂದ ಹೊರತರಲು ಯುವಕರಿಗಾಗಿ ಯುವ ಆಯೋಗವನ್ನು ರಚಿಸಬೇಕೆಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News