ಭಯೋತ್ಪಾದಕನಿಗೆ ಹಿಂಸೆಯೇ ಧರ್ಮ: ಬರಗೂರು ರಾಮಚಂದ್ರಪ್ಪ

Update: 2019-02-18 16:34 GMT

ಬೆಂಗಳೂರು, ಫೆ.18: ಭಯೋತ್ಪಾದನೆ ವಿಶ್ವದ ಮಟ್ಟದಲ್ಲಿ ಬೆಳೆದಿದ್ದು, ನಿಜವಾದ ಧಾರ್ಮಿಕನು ಎಂದಿಗೂ ಭಯೋತ್ಪಾದಕ ಆಗುವುದಿಲ್ಲ. ಭಯೋತ್ಪಾದಕನಿಗೆ ಹಿಂಸೆಯೇ ಧರ್ಮವಾಗಿರುತ್ತದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಆಯೋಜಿಸಿದ್ದ ಭಾರತೀಯ ವೀರ ಯೋಧರ ಮೇಲಿನ ಪೈಶಾಚಿಕ ಕೃತ್ಯ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಧರ್ಮ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದಿಲ್ಲ, ಧರ್ಮದ ಹೆಸರಲ್ಲಿ ಭಯೋತ್ಪಾದನೆ ಎಂದಿಗೂ ನಡೆಯುವುದಿಲ್ಲ. ಹಿಂಸೆಯನ್ನು ಧರ್ಮವನ್ನಾಗಿಸಿಕೊಂಡ ಕೆಲವರು ವಿಕೃತಿಯನ್ನು ಮೆರೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮುದಾಯದ ಎಲ್ಲ ಧರ್ಮದಲ್ಲೂ ಬೆರಳೆಣಿಕೆಯಷ್ಟು ಕಿಡಿಗೇಡಿಗಳಿದ್ದಾರೆ. ‘ಹಿಂದುಗಳೆಲ್ಲ ವ್ಯಾಘ್ರರಲ್ಲ, ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ’ ಹಿಂದೂಗಳಿಗೆ ವಿವೇಕಾನಂದರು, ಮುಸ್ಲಿಮರಿಗೆ ಮುಹಮ್ಮದ್ ಪೈಗಂಬರ್ ಹಾಗೂ ಕ್ರೈಸ್ತರಿಗೆ ಮದರ್ ಥೆರೇಸಾ ಆದರ್ಶವಾಗಬೇಕೇ ಹೊರತು, ಹಿಂದುಗಳಿಗೆ ಗೋಡ್ಸೆ, ಮುಸ್ಲಿಮರಿಗೆ ಒಸಾಮಾ ಬಿನ್ ಲಾಡೆನ್ ಆದರ್ಶವಾಗಬಾರದು ಎಂದು ವಿಕೃತ ಮನಸ್ಸಿನ ಕಿಡಿಗೇಡಿಗಳಿಗೆ ಸಲಹೆ ಮಾಡಿದರು.

ಪಾಕಿಸ್ತಾನದ ಬೆನಜೀರ್ ಭುಟ್ಟೋರವರ ಹತ್ಯೆಯನ್ನು ಪಾಕಿಸ್ತಾನದ ಮುಸ್ಲಿಮರು ಮಾಡಿದ್ದಾರೆ. ಆದರೆ, ಯಾರೋ ಮಾಡಿದ ಕೃತ್ಯಕ್ಕೆ ಇಡೀ ಮುಸ್ಲಿಂ ಸಮುದಾಯವನ್ನು ದೂಷಿಸುವುದು ತಪ್ಪು. ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲ ಕಿಡಿಗೇಡಿಗಳು ಸಮಾಜದಲ್ಲಿ ಸಾಮರಸ್ಯದ ಜೀವನಕ್ಕೆ ಕಲ್ಲು ಎಸೆಯುತ್ತಾರೆ. ಅಂತಹವರು ಎಲ್ಲ ಸಮುದಾಯಗಳಲ್ಲೂ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ ಹೋರಾಟಕ್ಕೆ ಮುಸ್ಲಿಂ ಸಮುದಾಯ ಅಪಾರ ಕೊಡುಗೆ ನೀಡಿದ್ದು, ಹೋರಾಟದಲ್ಲಿ ದೊಡ್ಡ ಪರಂಪರೆಯೇ ಚರಿತ್ರೆಯ ಪುಟದಲ್ಲಿ ಸೇರಿ ಹೋಗಿದೆ. ಅದನ್ನು ಗಟ್ಟಿಯಾಗಿ ಮುಸ್ಲಿಮರು ಮಾತ್ರ ದನಿಗೂಡಿಸದೇ, ಎಲ್ಲ ಸಮುದಾಯದವರು ದನಿಗೂಡಿಸಬೇಕೆಂದು ಹೇಳಿದರು.

ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಯನ್ನು ದೇಶದಿಂದ ತೊಲಗಿಸಲು ಬೆಂಬಲ ಸೂಚಿಸುವಂತೆ ವಿಶ್ವ ಸಮುದಾಯವನ್ನು ಮನವೊಲಿಸಬೇಕಾದ ಅವಶ್ಯಕತೆಯಿದೆ. ಅಲ್ಲದೆ, ಇಡೀ ದೇಶವೇ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಆತ್ಮಹತ್ಯೆ ದಾಳಿಯನ್ನು ರಾಜಕೀಯ ಮಾಡದೇ ಖಂಡಿಸುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ಗಡಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಹಾಗೂ ಕುಟುಂಬಕ್ಕೆ ಆತ್ಮಸ್ಥೈರ್ಯ ನೀಡಬೇಕು. ಕೊಲೆ ಕೊಲೆಯೇ, ಸಾವು ಸಾವೇ, ಹಲ್ಲೆ ಹಲ್ಲೆಯೇ ಆಗಿರುತ್ತದೆಯೇ ಹೊರತು, ಸಾವುಗಳಿಗೆ ಯಾವುದೇ ಮತದ ಪಕ್ಷದ ಪಟ್ಟಿ ಅಂಟಿಸುವುದು ಸರಿಯಾದುದ್ದಲ್ಲ. ಪುಲ್ವಾಮಾದ ಘಟನೆ ಹೇಯಕೃತ್ಯವಾಗಿದೆ ಎಂದರು.

ಸೈನಿಕರು ಕುಟುಂಬದಿಂದ ದೂರ ಇದ್ದು, ಮಾನವ ಸಮಾಜದ ಬಂಧನದಿಂದ ಅನಿಶ್ಚಿತೆಯ ಬದುಕು ನಡೆಸುತ್ತಿರುತ್ತಾರೆ. ಹೀಗಾಗಿ, ರಾಜ್ಯ ಹಾಗೂ ಕೇಂದ್ರ ಸರಕಾರ ಸೈನ್ಯಕ್ಕೆ ಸೇರುವ ಕುಟುಂಬಗಳಿಗೆ ಹೊಸ ಯೋಜನೆಯನ್ನು ರೂಪಿಸುವ ಮೂಲಕ ನಮ್ಮನ್ನು ರಕ್ಷಣೆ ಮಾಡುತ್ತಿರುವ ಸೈನಿಕರ ಕುಟುಂಬಗಳಿಗೆ ಆಸರೆಯಾಗಬೇಕೆಂದು ಮನವಿ ಮಾಡಿದರು.

ಮುಸ್ಲಿಮರ ಪವಿತ್ರ ಗ್ರಂಥ ಕುರಾನ್‌ನಲ್ಲಿ ಯಾವುದೇ ಧರ್ಮದ ಬಗ್ಗೆ ಅಪಪ್ರಚಾರವಿಲ್ಲ ಹಾಗೂ ಭಯೋತ್ಪಾದನೆಗೆ ಖಡ್ಗವೆತ್ತಿ ಹೋರಾಡುವವ ನನ್ನವನಲ್ಲ ಎಂದು ಸಾರಿದೆ.

-ಮೌಲನಾ ಶಾಫೀ ಸಅದಿ, ರಾಜ್ಯ ಮುಸ್ಲಿಂ ಜಮಾಆತ್‌ ಕಾರ್ಯದರ್ಶಿ

ಗಾಂಧೀಜಿ ಫೋಟೋಗೆ ಗುಂಡು ಹಾರಿಸುವವರು, ಸಂವಿಧಾನವನ್ನು ಸುಟ್ಟು ಅಂಬೇಡ್ಕರ್‌ಗೆ ಅಪಮಾನ ಮಾಡುವವರು, ಸೈನಿಕರ ಹತ್ಯೆಯಲ್ಲೂ ಸಂಭ್ರಮಿಸುವ ಕಿಡಿಗೇಡಿ ದ್ರೋಹಿಗಳು ದೇಶದಲ್ಲಿದ್ದಾರೆ.

-ಬರಗೂರು ರಾಮಚಂದ್ರಪ್ಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News