ಫೆ.20 ರಿಂದ ಏರ್ ಶೋ: ರಾಜಧಾನಿ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಭದ್ರತೆ- ಟಿ.ಸುನೀಲ್ ಕುಮಾರ್

Update: 2019-02-18 17:05 GMT

ಬೆಂಗಳೂರು, ಫೆ.18: ಫೆ.20 ರಿಂದ ಸತತ ಐದು ದಿನಗಳ ನಗರದ ಯಲಹಂಕದ ಬಳಿ ನಡೆಯಲಿರುವ ಪ್ರತಿಷ್ಠಿತ ಏರೋ ಇಂಡಿಯಾ ಪ್ರದರ್ಶನ ಹಿನ್ನೆಲೆ, ಬಿಗಿ ಪೊಲೀಸ್ ಭದ್ರತೆ ನೀಡಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ತಿಳಿಸಿದರು.

ಸೋಮವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ನಿರ್ವಹಣೆ ಹಾಗೂ ಸುಗಮ ಸಂಚಾರ ನಿರ್ವಹಣೆಗೆ ಪ್ರತ್ಯೇಕವಾಗಿ ಎರಡು ವಿಧದಲ್ಲಿ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾನೂನು ಸುವ್ಯವಸ್ಥೆ ನಿರ್ವಹಣೆಗೆ, 7 ಡಿಸಿಪಿ, 20 ಎಸಿಪಿ, 90 ಪೊಲೀಸ್ ಇನ್ಸ್ ಪೆಕ್ಟರ್, 161ಎಸ್ಸೈ, 1,900 ಎಎಸ್ಸೈ, ಮುಖ್ಯ ಪೇದೆಗಳನ್ನು ನಿಯೋಜನೆ ಮಾಡಲಾಗಿದ್ದು, ಹೆಚ್ಚುವರಿಯಾಗಿ 11 ಕೆಎಸ್‌ಆರ್ಪಿ ತುಕಡಿಗಳ ತಂಡ, 5 ನಗರ ಸಶಸ್ತ್ರ ಮೀಸಲು ಪಡೆ, 2 ಕ್ವಿಕ್ ರೆಸ್ಪಾನ್ಸ್ ತಂಡ ಹಾಗೂ 2 ಡಿಸ್ವಾಟ್ ಟೀಂ ನಿಯೋಜನೆ ಮಾಡಲಾಗಿದೆ ಎಂದು ವಿವರಿಸಿದರು.

ಇದರ ಜೊತೆಗೆ ವಿಶೇಷ ಗಸ್ತಿಗೆ ಚೀತಾ ಹಾಗೂ ಹೊಯ್ಸಳ ವಾಹನಗಳ ವ್ಯವಸ್ಥೆ ಮಾಡಲಾಗಿದೆ. 12 ಪ್ರವೇಶ ದ್ವಾರಗಳಲ್ಲಿ ವಿಶೇಷ, ಸೂಕ್ಷ್ಮ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಏರ್ ಡಿಫೆನ್ಸ್ ಕರ್ತವ್ಯಕ್ಕಾಗಿ 15 ವಿಚಕ್ಷಣಾ ಕೇಂದ್ರಗಳ ವ್ಯವಸ್ಥೆ ಸೇರಿದಂತೆ ಪೊಲೀಸ್ ಸಿಬ್ಬಂದಿಗಳ ಜೊತೆಗೆ ಗರುಡ ಫೋರ್ಸ್, ಶಾರ್ಪ್ ಶೂಟರ್‌ಗಳು ಕಟ್ಟೆಚ್ಚರ ವಹಿಸಲಿದ್ದಾರೆ ಎಂದು ಹೇಳಿದರು.

ವಾಯು ನೆಲೆ ಒಳಗಡೆ, ಹೊರಗಡೆ ಹಾಗೂ ಏರ್ ಡಿಫೆನ್ಸ್ ಹೀಗೆ ಒಟ್ಟು ಮೂರು ಕಡೆ ನಿಯಂತ್ರಣ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಜತೆಗೆ 4 ತುರ್ತು ನಿರ್ವಹಣಾ ದಳಗಳ ನಿಯೋಜನೆ ಮಾಡಲಾಗಿದೆ. ವಾಯು ನೆಲೆಯ ಸುತ್ತಮುತ್ತ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದಿಂದ ತಪಾಸಣೆ ನಡೆಸುತ್ತದೆ.

ಬೆಂಗಳೂರು ನಗರದಾದ್ಯಂತ ವಾಸ್ತವ್ಯ ಇರುವ ಪ್ರತಿ ಗಣ್ಯರಿಗೆ ಹೆಚ್ಚುವರಿ ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಭದ್ರತೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಏರ್ ಶೋ ನಡೆಯುವ ಅವಧಿಯಲ್ಲಿ ಯಾವುದೇ ಇತರ ವೈಮಾನಿಕ ವಾಹನ ಹಾರಾಟಕ್ಕೆ ಅವಕಾಶವಿಲ್ಲ ಎಂದರು.

‘ಆಕ್ಷೇಪಾರ್ಹ ಪೋಸ್ಟ್ ವಿರುದ್ಧ ಕ್ರಮ’

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಯೋಧರ ಮೇಲೆ ನಡೆಸಿರುವ ದಾಳಿ ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

-ಟಿ.ಸುನೀಲ್ ಕುಮಾರ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News