ಜೆಡಿಎಸ್ ಜೊತೆ ಕ್ಷೇತ್ರ ಹಂಚಿಕೆ ಬಗ್ಗೆ ಶೀಘ್ರವೇ ತೀರ್ಮಾನ: ದಿನೇಶ್ ಗುಂಡೂರಾವ್

Update: 2019-02-18 17:12 GMT

ಬೆಂಗಳೂರು, ಫೆ.18: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕ್ಷೇತ್ರಗಳ ಹಂಚಿಕೆ ಕುರಿತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಲು ಶೀಘ್ರವೇ ಸಭೆ ನಿಗದಿ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕೆಪಿಸಿಸಿ ಸಮನ್ವಯ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಹಾಗೂ ಪ್ರಚಾರದ ವೈಖರಿ ಯಾವ ರೀತಿ ಇರಬೇಕು ಎಂಬುದರ ಕುರಿತು ಚರ್ಚಿಸಿದ್ದೇವೆ. ಆದಷ್ಟು ಬೇಗ ಕ್ಷೇತ್ರಗಳ ಹಂಚಿಕೆ ಕುರಿತು ಜೆಡಿಎಸ್ ಜೊತೆ ಚರ್ಚಿಸಿ, ಅಭ್ಯರ್ಥಿಗಳ ಹೆಸರನ್ನು ಘೋಷಿಸಬೇಕೆಂದು ಸಮನ್ವಯ ಸಮಿತಿಯ ಎಲ್ಲ ಸದಸ್ಯರು ಒಕ್ಕೊಲರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಅಭ್ಯರ್ಥಿಗಳ ಆಯ್ಕೆ ಸಂಬಂಧ ಎಐಸಿಸಿ ಕಾರ್ಯದರ್ಶಿಗಳು ಎಲ್ಲ ವಿಭಾಗಗಳಿಗೂ ಭೇಟಿ ನೀಡಿ, ಪ್ರತಿಯೊಂದು ಕ್ಷೇತ್ರದ ಬ್ಲಾಕ್ ಅಧ್ಯಕ್ಷರು, ಜನಪ್ರತಿನಿಧಿಗಳು, ಮುಖ್ಯ ಪದಾಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಸಮಾಲೋಚನೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ ಎಂದು ಅವರು ಹೇಳಿದರು.

ಲೋಕಸಭಾ ಕ್ಷೇತ್ರಗಳು ದೊಡ್ಡದಾಗಿರುವುದರಿಂದ ಅಭ್ಯರ್ಥಿಗಳಿಗೆ ಚುನಾವಣೆಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ಆದುದರಿಂದ, ಜೆಡಿಎಸ್ ನಾಯಕರ ಜೊತೆ ಚರ್ಚೆ ಮಾಡಿ, ಕ್ಷೇತ್ರಗಳ ಹಂಚಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಭ್ರಷ್ಟಾಚಾರದಲ್ಲಿ ಬಿಜೆಪಿ ಪ್ರಥಮ: ಪ್ರಚಾರದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಬಿಜೆಪಿ ಖರ್ಚು ಮಾಡುತ್ತಿದೆ. ಆ ಹಣ ಎಲ್ಲಿಂದ ಬರುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿರುವ ಪಕ್ಷ ಬಿಜೆಪಿ. ಅಷ್ಟೊಂದು ಯಥೇಚ್ಚವಾಗಿ, ಕೋಟಿಗಳಿಗೆ ಲೆಕ್ಕವೇ ಇಲ್ಲದಂತೆ ಖರ್ಚು ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಸುಳ್ಳಿನ ಪ್ರಚಾರದ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳ ಕಾಲ ಅವರು ಮಾಡಿರುವ ಆಡಳಿತದ ಕುರಿತು ಚರ್ಚೆಯೇ ಇಲ್ಲ. ಈಗ ಭಾವನಾತ್ಮಕವಾಗಿ ಬೇರೆ ವಿಷಯದ ಕುರಿತು ಜನರ ಗಮನ ಸೆಳೆಯುವ ಪ್ರಯತ್ನವಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಬಿಜೆಪಿಯವರು ಏನು ಸಾಧನೆ ಮಾಡಿದ್ದಾರೆ, ಏನು ಕೆಲಸ ಮಾಡಿದ್ದಾರೆ, ಜನರಿಗೆ ಉದ್ಯೋಗ ಕೊಟ್ಟಿದ್ದಾರಾ? ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡಿದ್ದಾರಾ? ದೇಶದ ಆರ್ಥಿಕ ಪರಿಸ್ಥಿತಿ ಹೇಗಿದೆ? ಅಚ್ಛೇ ದಿನ್ ಬಂತಾ ಎಂಬುದರ ಬಗ್ಗೆ ಚರ್ಚಿಸಲು ಬಿಜೆಪಿಯವರು ತಯಾರಾಗಿಲ್ಲ. ಇವರ ವೈಫಲ್ಯಗಳ ವಿರುದ್ಧ ನಾವು ಹೋರಾಡಬೇಕು. ಈ ವಿಚಾರಗಳನ್ನು ಜನರ ಮುಂದಿಡುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ನಾಯಕರು ಮಾಡಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮೈತ್ರಿಗೆ ಧಕ್ಕೆ ಬರುವ ಹೇಳಿಕೆ ನೀಡುವಂತಿಲ್ಲ: ಸಮ್ಮಿಶ್ರ ಸರಕಾರಕ್ಕೆ ಅಥವಾ ನಮ್ಮ ಮೈತ್ರಿಯಲ್ಲಿ ಗೊಂದಲಗಳನ್ನು ಉಂಟು ಮಾಡುವಂತಹ ಯಾವುದೇ ಹೇಳಿಕೆಗಳನ್ನು ನೀಡಬಾರದು. ಮುಖಂಡರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಪಕ್ಷದ ಚೌಕಟ್ಟಿನಲ್ಲಿ ವ್ಯಕ್ತಪಡಿಸಬೇಕು ಎಂಬ ತೀರ್ಮಾನ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ, ನಮ್ಮ ಅಭ್ಯರ್ಥಿ, ಕ್ಷೇತ್ರಗಳ ಬಗ್ಗೆಯಾಗಲಿ ಅಥವಾ ಬೇರೆ ಯಾವುದೇ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಬಾರದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಕೆಪಿಸಿಸಿ ಸಮನ್ವಯ ಸಮಿತಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಟಿ.ಬಿ.ಜಯಚಂದ್ರ, ತನ್ವೀರ್ ಸೇಠ್, ವಿನಯ್ ಕುಮಾರ್ ಸೊರಕೆ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News