ಕೃಷಿ ಪರಿಕರದಾರರು ಕೃಷಿಕರು-ಕೃಷಿ ವಿಜ್ಞಾನಿಗಳ ನಡುವಿನ ಕೊಂಡಿಯಾಗಬೇಕು: ಉಷಾರಾಣಿ

Update: 2019-02-18 17:34 GMT

ಬೆಂಗಳೂರು, ಜ. 18: ಕೃಷಿ ಪರಿಕರದಾರರು ಕೃಷಿಕರು ಮತ್ತು ಕೃಷಿ ವಿಜ್ಞಾನಿಗಳ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣೆ ನಿರ್ವಹಣಾ ಸಂಸ್ಥೆಯ ನಿರ್ದೇಶಕಿ ಉಷಾರಾಣಿ ಕರೆ ನೀಡಿದ್ದಾರೆ.

ಸೋಮವಾರ ಕೃಷಿ ವಿವಿ ಆಶ್ರಯದಲ್ಲಿ ಏರ್ಪಡಿಸಿದ್ದ ಕೃಷಿ ವಿಸ್ತರಣಾ ಸೇವೆಯಲ್ಲಿ ಪರಿಕರ ಮಾರಾಟಗಾರರಿಗೆ ಡಿಪ್ಲೊಮಾ(ದೇಸಿ) ಕಾರ್ಯಾಗಾರ ಮತ್ತು ಪದವಿ ಪ್ರಮಾಣಪತ್ರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕೃಷಿ ಪರಿಕರ ಉದ್ದಿಮೆದಾರರು ಪರಿಕರಗಳ ಅಂಗಡಿಗಳನ್ನು ಪ್ರಾರಂಭಿಸಲು ಕಷಿ ವಿಜ್ಞಾನದಲ್ಲಿ ಡಿಪ್ಲೊಮಾ ಪದವಿ ಹೊಂದಿರುವುದು ಕಡ್ಡಾಯ. ಹೀಗಾಗಿ ಹೆಚ್ಚು-ಹೆಚ್ಚು ಉದ್ದಿಮೆದಾರರು ಕೃಷಿ ವಿಜ್ಞಾನದಲ್ಲಿ ಡಿಪ್ಲೊಮಾ ಪದವಿ ಪಡೆಯುತ್ತಿದ್ದಾರೆ. ಇವರು ವ್ಯಾಪಾರ ಮನೋಭಾವದ ಜೊತೆಗೆ ಸೇವಾ ಮನೋಭಾವದಿಂದ ಕೃಷಿಕರೊಂದಿಗೆ ವ್ಯವಹರಿಸಬೇಕೆಂದು ಉಷಾರಾಣಿ ಇದೇ ವೇಳೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿವಿ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ಬೆಂಗಳೂರು ಕೃಷಿ ವಿವಿ ದೇಶದಲ್ಲಿಯೇ ದೇಸಿ ಕಾರ್ಯಕ್ರಮದ ಅನುಷ್ಠಾನದಲ್ಲಿ ಮೊದಲನೆ ಸ್ಥಾನದಲ್ಲಿರುವುದು ಸಂತಸದ ವಿಷಯ. ಕೃಷಿ ಪರಿಕರಗಳ ಅಂಗಡಿಗಳು ಸೇವಾ ಕೇಂದ್ರಗಳಾಗಿ ಬಿತ್ತನೆಬೀಜ, ರಸಗೊಬ್ಬರಗಳು, ಔಷಧಿ ಸಾಮಗ್ರಿಗಳನ್ನು ಒದಗಿಸುವುದರ ಜೊತೆಗೆ ರೈತರಿಗೆ ಸೂಕ್ತ ಜ್ಞಾನವನ್ನು ನೀಡುವುದು ಅವಶ್ಯಕವೆಂದು ಅಭಿಪ್ರಾಯಪಟ್ಟರು. ಡಿಪ್ಲೊಮಾ ಪಡೆದ ಕೋಲಾರದ ಚಂದ್ರಶೇಖರ್ ಮಾತನಾಡಿ, ಡಿಪ್ಲೊಮಾದಿಂದ ನಮ್ಮ ಮನೋಭಾವದಲ್ಲಿ ಬದಲಾವಣೆಯಾಗಿ ರೈತರನ್ನು ಕೇವಲ ಖರೀದಿದಾರರಾಗಿ ನೋಡದೆ ಮಾಹಿತಿ ಪಡೆಯಲು ಬರುವ ಅನುಭವಭರಿತ ಶಿಕ್ಷಣಾರ್ಥಿಗಳಾಗಿ ಪರಿಗಣಿಸುತ್ತಿದ್ದೇನೆ.

ಸರಕಾರವು ಕೃಷಿ ಪರಿಕರಗಳ ಅಂಗಡಿಯ ಮಾಲಕರು ವ್ಯಾಪಾರದ ಜೊತೆಗೆ ಸೇವೆಯನ್ನು ಕಡ್ಡಾಯಗೊಳಿಸಿ ಅಂಗಡಿಗಳಲ್ಲಿ ಕೃಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪುಸ್ತಕಗಳು, ಹಸ್ತ ಪತ್ರಿಕೆ ಮುಂತಾದವುದಗಳನ್ನು ಇಡುವುದನ್ನು ಕಡ್ಡಾಯಗೊಳಿಸಬೇಕೆಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News