ಪರೀಕ್ಷಾ ಪರ್ವ: ಗರಿಷ್ಠ ಅಂಕ ನಿಮ್ಮ ಗುರಿಯಾಗಿರಲಿ

Update: 2019-02-18 18:39 GMT

ಎಸೆಸೆಲ್ಸಿಯಲ್ಲಿ 625 ಹಾಗೂ ಪಿಯುಸಿಯಲ್ಲಿ 600 ಒಟ್ಟು ಗರಿಷ್ಠ ಅಂಕಗಳಾಗಿವೆ. ಗರಿಷ್ಠ ಅಂಕಗಳನ್ನು ನಿಗದಿಪಡಿಸಿರುವುದು ಯಾರೂ ಅದನ್ನು ಪಡೆಯಬಾರದು ಎಂದಲ್ಲ. ಬದಲಾಗಿ ಅದನ್ನು ಪಡೆಯಲು ನಿಮಗೂ ಸಾಧ್ಯ. ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪರೀಕ್ಷಾ ಮಂಡಳಿ ರಚನೆಯಾದಂದಿನಿಂದಲೂ ಗರಿಷ್ಠ ಅಂಕವನ್ನು ಪಡೆದ ಇತಿಹಾಸ ನಿರ್ಮಾಣವಾಗಿರಲಿಲ್ಲ. ಆದರೆ ಇತ್ತೀಚಿನ ಐದಾರು ವರ್ಷಗಳಿಂದ ಕೆಲವು ವಿದ್ಯಾರ್ಥಿಗಳು ಇತಿಹಾಸ ನಿರ್ಮಿಸುತ್ತಿದ್ದಾರೆ. ಎಲ್ಲಾ ವಿಷಯಗಳಲ್ಲಿ ಗರಿಷ್ಠ ಅಂಕ ಪಡೆದು 625ರಲ್ಲಿ 625 ಪಡೆದ ಸಾಧನೆಗೆ ಹಲವು ವಿದ್ಯಾರ್ಥಿಗಳು ಪಾತ್ರರಾಗಿದ್ದಾರೆ. ಕಲಿಕೆಯಲ್ಲಿ ಮುಂದಿರುವವರೂ ನಿಧಾನ ಕಲಿಕೆಯವರೂ ಎಲ್ಲರೂ ತಮ್ಮ ಗುರಿಯನ್ನು ಗರಿಷ್ಠ ಅಂಕದ ಕಡೆಗೆ ಇಟ್ಟುಕೊಳ್ಳಬೇಕು. ಆ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಸಾಗಬೇಕು. ಅಂಕ ಪಡೆಯುವುದೆಂದರೆ ಅದು ಕೇವಲ ವಿಷಯ ಕಂಠಪಾಠ ಮಾಡುವುದು ಎಂದರ್ಥವಲ್ಲ. ನಿಮ್ಮ ಬರೆಯುವ ಶೈಲಿ, ಕ್ರಮ, ದೀರ್ಘ ಉತ್ತರಕ್ಕೆ ಬರೆಯುವ ಪೀಠಿಕೆ, ವಿಷಯ, ಉಪ ಸಂಹಾರಗಳು ಎಲ್ಲವೂ ನಿಮಗೆ ಹೆಚ್ಚೆಚ್ಚು ಅಂಕ ತಂದು ಕೊಡಬಲ್ಲವು. ಎಸೆಸೆಲ್ಸಿ ವಿದ್ಯಾರ್ಥಿಗಳು ತಮ್ಮ ಭಾಷಾ ವಿಷಯಗಳಲ್ಲಿನ ಪತ್ರಲೇಖನ ಗಳನ್ನು ಕ್ರಮಬದ್ಧವಾದ ಹಂತಗಳ ಮೂಲಕ ಬರೆಯಬೇಕು. ಮೂರು ಭಾಷೆಗಳಲ್ಲಿನ ಪದ್ಯಗಳನ್ನು ಕಂಠಪಾಠ ಮಾಡಲೇಬೇಕು. ಪಠ್ಯದಲ್ಲಿರುವಂತೆ ಯಥಾವತ್ತಾಗಿ ಬರೆಯಬೇಕು. ಪಿಯುಸಿ ವಿದ್ಯಾರ್ಥಿಗಳು ವಿಷಯಗಳಲ್ಲಿನ ದೀರ್ಘ ಉತ್ತರದ ಪ್ರಶ್ನೆಗಳಿಗೆ ಅವುಗಳ ಅಂಶಗಳನ್ನು ಎದ್ದು ಕಾಣುವಂತೆ ಬರೆಯುವುದು ಮುಖ್ಯ. ನೀವು ಯಾವ ಪ್ರಶ್ನೆಗೆ ಉತ್ತರಿಸುತ್ತೀರೋ ಅದೇ ಪ್ರಶ್ನೆಯ ಸಂಖ್ಯೆಯನ್ನು ಕೂಡಾ ಸ್ಪಷ್ಟವಾಗಿ ಕಾಣುವಂತೆ ಬರೆಯಬೇಕು. ನಿಗದಿತ ಸಂಖ್ಯೆಗಿಂತ ಹೆಚ್ಚುವರಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗುವುದು ವ್ಯರ್ಥ ಪ್ರಯತ್ನ. ಇದರಿಂದ ಕಾಲವೂ ವ್ಯರ್ಥವಾಗುತ್ತದೆ. ಪರೀಕ್ಷೆ ಎಂದರೆ ನಿಗದಿಯಾದ ಸಮಯದಲ್ಲಿ ನಿಗದಿಪಡಿಸಿದ ಪ್ರಶ್ನೆಗಳಿಗೆ ಉತ್ತರಿಸುವ ಜಾಣ್ಮೆಯ ಕೆಲಸವೂ ಹೌದು.
ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಸಮಯವೇ ಸಾಕಾಗಲಿಲ್ಲ, ಉತ್ತರ ಗೊತ್ತಿತ್ತು ಆದರೆ ಬರೆಯಲಾಗಲಿಲ್ಲವೆಂದು ಪರೀಕ್ಷೆ ಮುಗಿದ ಮೇಲೆ ಅಲವತ್ತುಗೊಳ್ಳತ್ತಾರೆ. ಪರೀಕ್ಷೆಯು ನಿಮ್ಮ ಸಮಯ ನಿರ್ವಹಣೆಗೆ ಒಡ್ಡುವ ಸವಾಲು ಕೂಡಾ ಆಗಿದೆ. ಗರಿಷ್ಠ ಅಂಕ ಪಡೆಯಲು ಗುರಿಯಿಟ್ಟ ವಿದ್ಯಾರ್ಥಿಗಳು ನಿಗದಿಯಾದ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಬೇಕು. ಅದಕ್ಕಾಗಿ ಆರಂಭದಿಂದಲೇ ಸಮಯ ಹೊಂದಾಣಿಕೆ ಮಾಡಿಕೊಂಡು ಉತ್ತರಿಸಿ. ಯಾವುದೋ ಒಂದು ಕಷ್ಟಕರ ಪ್ರಶ್ನೆಯ ಬಗ್ಗೆ ಯೋಚಿಸುತ್ತಾ ಕಾಲಹರಣ ಮಾಡಬೇಡಿ. ಒಂದೊಂದು ನಿಮಿಷವೂ ನಿಮಗೆ ಮುಖ್ಯವಾಗಿದೆ.

Writer - ಎ. ಆರ್. ಅನಂತಾಡಿ

contributor

Editor - ಎ. ಆರ್. ಅನಂತಾಡಿ

contributor

Similar News