×
Ad

ಫೆ.21 ರಿಂದ 11ನೆ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ

Update: 2019-02-19 18:51 IST

ಬೆಂಗಳೂರು, ಫೆ.19: 11ನೆ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನ ಚಿತ್ರೋತ್ಸವ ಫೆ.21ರಿಂದ ಫೆ.27ರವರೆಗೆ ನಡೆಯಲಿದ್ದು, ರಾಜಾಜಿನಗರದ ಒರಾಯನ್ ಮಾಲ್‌ನಲ್ಲಿ ಒಟ್ಟು 60 ದೇಶಗಳ 225 ಸಿನೆಮಾಗಳು ಪ್ರದರ್ಶನಗೊಳ್ಳಲಿವೆ ಎಂದು ವಾರ್ತಾ ಇಲಾಖೆಯ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು.

ಮಂಗಳವಾರ ವಾರ್ತಾ ಇಲಾಖೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಫೆ.21ರ ಸಂಜೆ 6ಕ್ಕೆ 11ನೆ ಅಂತರ್‌ರಾಷ್ಟ್ರೀಯ ಚಿತ್ರೋತ್ಸವವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಈ ವೇಳೆ ಹಿರಿಯ ನಟ ಅನಂತನಾಗ್, ಬಾಲಿವುಡ್ ನಿರ್ಮಾಪಕ, ನಿರ್ದೇಶಕ ರಾಹುಲ್ ರವೈಲ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದರು.

ಫೆ.22ರಿಂದ ರಾಜಾಜಿನಗರದಲ್ಲಿರುವ ಒರಾಯನ್ ಮಾಲ್‌ನ 11 ಪಿವಿಆರ್ ಚಿತ್ರಮಂದಿರಗಳಲ್ಲಿ 60 ದೇಶಗಳ 225 ಸಿನೆಮಾಗಳು ಪ್ರದರ್ಶನಗೊಳ್ಳಲಿವೆ. ಚಿತ್ರೋತ್ಸವದ ಆರಂಭದ ಚಲನಚಿತ್ರವಾಗಿ ಇರಾನ್ ದೇಶದ ಪೇಮನ್ ಮಾದಿ ನಿರ್ದೇಶಿಸಿರುವ ‘ಬಾಂಬ್, ಎ ಲವ್ ಸ್ಟೋರಿ’ ಪ್ರದರ್ಶನಗೊಳ್ಳಲಿದೆ ಎಂದು ಅವರು ಹೇಳಿದರು.

ಫೆ.27ರಂದು ಮುಕ್ತಾಯದ ಸಿನೆಮಾವಾಗಿ ಇರಾನ್ ಸಿನೆಮಾ ‘ಟೇಲ್ ಆಫ್ ದಿ ಸಿ’ ಪ್ರದರ್ಶನಗೊಳ್ಳಲಿದೆ. ಇದೇ ವೇಳೆ ಸಿನೆಮೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಪುರಸ್ಕೃತವಾದ ಸಿನೆಮಾಗಳಿಗೆ ರಾಜ್ಯಪಾಲ ವಜುಬಾಯಿ ವಾಲಾ ಬಹುಮಾನ ವಿತರಿಸಲಿದ್ದಾರೆ ಎಂದು ಅವರು ತಿಳಿಸಿದರು.

ಪೋಲೆಂಡ್‌ನ ಚಲನಚಿತ್ರ ನಿರ್ದೇಶಕ ಕ್ರಯ್‌ಜೋಫ್ ಜನ್ನುಸಿ, ಅಸ್ಟ್ರೇಲಿಯಾದ ಮೆಲ್ಬೋರ್ನ್ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದ ಕಾರ್ಯಕಾರಿ ನಿರ್ಮಾಪಕ ಮಾರ್ಕ್‌ವುಡ್, ಆಸ್ಟ್ರೇಲಿಯಾದ ಸ್ಕ್ರಿಪ್ಟ್ ಸಲಹಗಾರ್ತಿ ಕ್ಲೈರ್ ಡಬ್ಬಿನ್, ಮಾರ್ಕ್ ಶಿಲ್ಲಿಂಗ್, ಕಜ್ವನ್ ಝಲೆನ್, ನಾಕೂಮ್ ಮಾಚೆಚ್, ಜಪಾನಿನ ವಿಮರ್ಶಕಿ ಕುನ್ನೆಟ್ ಸೆಬೋನಿಯನ್, ನೆದರ್ಲೆಂಡ್, ಇಸ್ರೇಲ್, ಟರ್ಕಿಗಳಿಂದ ವಿದೇಶಿ ಪ್ರತಿನಿಧಿಗಳು, ಜ್ಯೂರಿಗಳು ಆಗಮಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಇರಾನ್‌ನ ನಿರ್ದೇಶಕ ಅಲಿ ಇಬ್ರಾಹಿಮಿ, ಕಜಕಿಸ್ತಾನದ ನಿರ್ಮಾಪಕಿ ಎಲಿನಾ ಲೆರಿನೊವಾ ಆಗಮಿಸಲಿದ್ದಾರೆ. ಚೀನಾ, ಶ್ರೀಲಂಕಾ, ಫಿಲಿಪಿನ್ಸ್, ಹಾಂಕಾಂಗ್, ಮಲೇಶ್ಯಾ, ಸಿಂಗಾಪುರ, ಇಂಡೋನೇಶಿಯಾ, ಕೊರಿಯಾ ಮೊದಲಾದ ದೇಶಗಳಿಂದ ಚಲನಚಿತ್ರಗಳು ಹಾಗೂ ಅದರ ನಿರ್ದೇಶಕರು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಬರ್ಲಿನ್, ಕಾನ್ಸ್, ವೆನ್ನಿಸ್, ಟೊರೆಂಟೊ, ಗೋವಾ, ಮುಂಬೈ, ಕೇರಳ ಅಂತರ್‌ರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಹಲವಾರು ಶ್ರೇಷ್ಠ ಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಅಕಾಡೆಮಿಯ ರಿಜಿಸ್ಟ್ರಾರ್ ದಿನೇಶ್, ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್ ಮತ್ತಿತರರಿದ್ದರು.

ಚಿತ್ರೋತ್ಸವದ ಏಳು ದಿನಗಳು ಚಿತ್ರಕಥಾ ಕಮ್ಮಟವಿರುತ್ತದೆ. ಮಾಸ್ಟರ್ ಕ್ಲಾಸ್ ವಿಭಾಗದಲ್ಲಿ ಜಗತ್ತಿನ ಖ್ಯಾತ ನಿರ್ದೇಶಕರ ಉಪನ್ಯಾಸ ಹಾಗೂ ಅವರೊಂದಿಗೆ ಸಂವಾದ ಕಾರ್ಯಕ್ರಮವಿರುತ್ತದೆ. ಕನ್ನಡ ಸಿನೆಮಾ ಹಾಗೂ ಅಂತರ್‌ರಾಷ್ಟ್ರೀಯ ಸಿನೆಮಾಗಳ ಕುರಿತು ಸಿದ್ಧಗೊಳಿಸಲಾಗಿರುವ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇರುತ್ತದೆ. ಅಕಾಡೆಮಿಯಿಂದ ಪ್ರಕಟಿಸಿರುವ ಸಿನೆಮಾ ಕುರಿತ ಪುಸ್ತಕಗಳ ಮಾರಾಟಕ್ಕಾಗಿ ಒಂದು ಮಳಿಗೆಯನ್ನು ತೆರೆಯಲಾಗಿದೆ.

-ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಕ್ಷ, ಕರ್ನಾಟಕ ಚಲಚಿತ್ರ ಅಕಾಡೆಮಿಯ

-ಚಿತ್ರರಂಗದ ಹಿರಿಯ ನಟ ಅಂಬರೀಷ್‌ಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಅವರ ಅಭಿನಯದ ರಂಗನಾಯಕಿ, ಏಳು ಸುತ್ತಿನ ಕೋಟೆ, ಅಂತ, ನಾಗರಹಾವು, ಪಡುವಾರಳ್ಳಿ ಪಾಂಡವರು ಸೇರಿ ಐದು ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

-ಹಿರಿಯ ನಟರಾದ ಸಿ.ಎಚ್.ಲೋಕನಾಥ್, ಎಂ.ಎನ್. ವ್ಯಾಸರಾವ್ ಹಾಗೂ ಬಂಗಾಳಿ ನಿರ್ದೇಶಕ ಮೃಣಾಲ್‌ಸೇನ್‌ಗೆ ಶ್ರದ್ದಾಂಜಲಿ ಸಲ್ಲಿಸಲು ಅವರ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ.

-ಪ್ರಕೃತಿ ವಿಕೋಪ ವಿಷಯಗಳನ್ನು ಕೇಂದ್ರೀಕರಿಸಿದ ಸಾಕ್ಷಚಿತ್ರಗಳ ವಿಭಾಗದಲ್ಲಿ ಹಲವು ಚಿತ್ರಗಳು ಪ್ರದರ್ಶನಗೊಳ್ಳಲಿವೆ.

-ಬಯೋಪಿಕ್ ವಿಭಾಗದಲ್ಲಿ ನಟ ರೋಮಿಶಿಂಡ್ಲರ್, ರಿತುಪರ್ಣೋಘೋಷ್, ಕವಿ ದೊಡ್ಡರಂಗೇಗೌಡ, ಸಾವಯವ ಕೃಷಿಕ ನಾರಾಯಣರೆಡ್ಡಿ ಹಾಗೂ ಸಿದ್ದಗಂಗಾ ಮಠದ ಶಿವಕುಮಾರಸ್ವಾಮೀಜಿ ಕುರಿತ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

-ಗಾಂಧೀಜಿ-150 ಎಂಬ ಶೀರ್ಷಿಕೆಯಲ್ಲಿ ಗಾಂಧೀಜಿ ಅವರನ್ನು ಸ್ಮರಿಸುವ ನಾಲ್ಕು ಸಿನೆಮಾಗಳನ್ನು ಪ್ರದರ್ಶಿಸಲಾಗುತ್ತಿದೆ.

-11ನೆ ಬೆಂಗಳೂರು ಅಂತರ್‌ರಾಷ್ಟ್ರೀಯ ಸಿನೆಮೋತ್ಸವಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ biffes.in ವೆಬ್‌ಸೈಟನ್ನು ಸಂಪರ್ಕಿಸಬಹುದಾಗಿದೆ.

-ಸಿನೆಮೋತ್ಸವಕ್ಕೆ ಭಾಗವಹಿಸಲು ಇಚ್ಛಿಸುವ ಸಾರ್ವಜನಿಕರಿಗೆ ನೋಂದಣಿ ಶುಲ್ಕ 800ರೂ. ಹಾಗೂ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಚಿತ್ರೋದ್ಯಮದ ಸದಸ್ಯರಿಗೆ 400ರೂ.ಆಗಿದೆ.

-ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಚಲನಚಿತ್ರ ಅಕಾಡೆಮಿ ಹಾಗೂ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News