ಮೋದಿ ಅವರಪ್ಪನಾಣೆ ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವಿಲ್ಲ: ಸಿದ್ದರಾಮಯ್ಯ
ಬೆಂಗಳೂರು, ಫೆ.19: ಬಿಜೆಪಿ ಪಕ್ಷವು ಏನೇ ತಿಪ್ಪರಲಾಗ ಹಾಕಿದರೂ ಕೇಂದ್ರದಲ್ಲಿ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ನರೇಂದ್ರಮೋದಿ ಅವರಪ್ಪನಾಣೆ ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೋದ ಕಡೆಯಲ್ಲ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ, ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದರು.
ಬಿಜೆಪಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ನಾಶಮಾಡಲು ಹೊರಟಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನವನ್ನು ಬದಲಾಯಿಸಲು ನಾವು ಅಧಿಕಾರಕ್ಕೆ ಬಂದಿರುವುದು ಎನ್ನುತ್ತಾರೆ. ನಾನೇನಾದರೂ ಪ್ರಧಾನಿಯಾಗಿದ್ದರೆ ಮೊದಲು ಅನಂತಕುಮಾರ್ ಹೆಗಡೆಯನ್ನು ಜೈಲಿಗೆ ಹಾಕುತ್ತಿದ್ದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಭ್ರಷ್ಟಾಚಾರದ ಭಾಗಿದಾರ: ಪ್ರಧಾನಿ ನರೇಂದ್ರಮೋದಿ ಮಾತೆತ್ತಿದರೆ ನಾನು ದೇಶದ ಚೌಕಿದಾರ ಎನ್ನುತ್ತಾರೆ. ಆದರೆ, ಅವರು ಚೌಕಿದಾರನಲ್ಲ, ಭ್ರಷ್ಟಾಚಾರದ ಭಾಗಿದಾರ. ಮೋದಿ ಮತ್ತೆ ಪ್ರಧಾನಿಯಾದರೆ ಸಂವಿಧಾನ ಉಳಿಯುವುದಿಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದರು. ಸತತ ಬರಗಾಲದಿಂದ ಕಂಗೆಟ್ಟಿರುವ ನಮ್ಮ ರಾಜ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸಿ, ರೈತರ ಸಾಲ ಮನ್ನಾ ಮಾಡಿ ಎಂದು ಅವರಿಗೆ ಕೈ ಮುಗಿದು ಬೇಡಿಕೊಂಡೆ. ಆದರೆ, ಪುಣ್ಯಾತ್ಮ ಜಪ್ಪಯ್ಯ ಅಂದರೂ ನಮ್ಮ ಮನವಿಗೆ ಸ್ಪಂದಿಸಿಲ್ಲ. ಆತ ಪುಣ್ಯಾತ್ಮ ಅಲ್ಲ ದುರಾತ್ಮ ಎಂದು ಅವರು ವ್ಯಂಗ್ಯವಾಡಿದರು.
ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಮ್ಮ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರನ್ನು ಹತೈಗೈದಿದ್ದಾರೆ. ಇದು ಕೇಂದ್ರ ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಆದರೆ, ಬಿಜೆಪಿಯವರು ಯೋಧರ ಹತೈಯ ಪ್ರಕರಣವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದರು.
ಪಾಕಿಸ್ತಾನಕ್ಕೆ ಭಯ ಹುಟ್ಟಿಸಲು ಕಾಂಗ್ರೆಸ್ ಪಕ್ಷದ ಆಡಳಿತದಿಂದ ಮಾತ್ರ ಸಾಧ್ಯ. 1971ರಲ್ಲಿ ಇಂದಿರಾಗಾಂಧಿ ಅಧಿಕಾರದಲ್ಲಿದ್ದಾಗ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ, ಬಾಂಗ್ಲಾದೇಶವನ್ನು ಪ್ರತ್ಯೇಕಗೊಳಿಸಿದರು. ಆಗ ಸಂಸತ್ತಿನಲ್ಲಿ ಅಟಲ್ ಬಿಹಾರಿ ವಾಜಪೇಯಿ, ಇಂದಿರಾಗಾಂಧಿಯನ್ನು ದುರ್ಗಿ ಎಂದು ಕರೆದಿದ್ದರು. ಈ ವಿಚಾರ ನರೇಂದ್ರಮೋದಿಗೆ ಗೊತ್ತಿಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಯುವ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಎಐಸಿಸಿ ಕಾರ್ಯದರ್ಶಿ ಕೇಶವ್ ಚಂದ್, ಸಂದೀಪ್ ವಾಲ್ಮೀಕಿ, ಕೃಷ್ಣ ಆಳ್ವಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಯಾರೂ ಭಿಕ್ಷುಕರಲ್ಲ
ನಾವೂ ಭಿಕ್ಷುಕರಲ್ಲ, ಅವರೂ ಭಿಕ್ಷುಕರಲ್ಲ. ಇದು ಸಮ್ಮಿಶ್ರ ಸರಕಾರ. ಈ ಸರಕಾರ ಐದು ವರ್ಷ ಅಧಿಕಾರ ಪೂರ್ಣಗೊಳಿಸುತ್ತದೆ. ಹಾಲಿ ನಮ್ಮ 10 ಸಂಸದರು ಇರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಸಾಧ್ಯವಿಲ್ಲ. ಈ ಸಂಬಂಧ ನಿನ್ನೆ ನಡೆದ ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸೀಟು ಹಂಚಿಕೆ ಕುರಿತು ಇನ್ನೂ ಜೆಡಿಎಸ್ ಜೊತೆ ಚರ್ಚೆ ಮಾಡಿಲ್ಲ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಸಂಘಟನೆ, ಸದಸ್ಯತ್ವ ನೋಂದಣಿ ಹಾಗೂ ಪಕ್ಷದ ಬಲವರ್ಧನೆ ಕುರಿತು ಚರ್ಚಿಸಲಾಗಿದೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ