×
Ad

ಇಂದಿರಾ ಕ್ಯಾಂಟೀನ್ ಮಾರ್ಷಲ್‌ಗಳ ನೇಮಕದಲ್ಲಿ ಅವ್ಯವಹಾರ: ಎನ್.ಆರ್ ರಮೇಶ್ ಆರೋಪ

Update: 2019-02-19 21:30 IST

ಬೆಂಗಳೂರು, ಫೆ.19: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಭದ್ರತೆ ಒದಗಿಸಲು ಮಾರ್ಷಲ್‌ಗಳನ್ನು ನೇಮಿಸಲಾಗಿದ್ದು, 268ಕ್ಕೂ ಅಧಿಕ ಮಾರ್ಷಲ್‌ಗಳ ನಕಲಿ ದಾಖಲೆಯನ್ನು ಸೃಷ್ಟಿಸಲಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಭದ್ರತೆ ಒದಗಿಸುವ ಮಾರ್ಷಲ್‌ಗಳ ನೇಮಕದಲ್ಲಿ 2017ರ ನವೆಂಬರ್‌ನಿಂದ 2018 ನವೆಂಬರ್‌ವರೆಗೆ ಪಾಲಿಕೆಯಿಂದ ಬಿಡುಗಡೆಯಾಗಿರುವ 14.50 ಕೋಟಿ ರೂ.ಗಳಲ್ಲಿ 8.70 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ನಗರದಲ್ಲಿ 174 ಇಂದಿರಾ ಕ್ಯಾಂಟೀನ್, 15 ಮೊಬೈಲ್ ಕ್ಯಾಂಟೀನ್ ಹಾಗೂ 19 ಅಡಿಗೆ ಮನೆಗಳ ಭದ್ರತಾ ವ್ಯವಸ್ಥೆಗೆ ಒಟ್ಟು 468 ಮಂದಿ ಮಾರ್ಷಲ್‌ಗಳನ್ನು 3 ಪಾಳಿಗಳಲ್ಲಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ಮಾಜಿ ಸೈನಿಕರ ಕಲ್ಯಾಣ ಅಭಿವೃದ್ಧಿ, ಸೊಸೈಟಿಯು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದೆ ಎಂದು ತಿಳಿಸಿದರು.

ಈ ವ್ಯವಹಾರದ ಸಂಬಂಧ 190 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿರುವ ಎನ್.ಆರ್.ರಮೇಶ್ ಅವರು ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಮತ್ತು 12 ತಿಂಗಳ ಅವಧಿಯಲ್ಲಿ ಲೂಟಿಯಾಗಿರುವ 8 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಸಂಸ್ಥೆಯಿಂದ ವಾಪಾಸ್ ಪಡೆಯಬೇಕು ಹಾಗೂ ಸಂಸ್ಥೆಗೆ ನೀಡಿರುವ ಉಪಗುತ್ತಿಗೆಯನ್ನು ರದ್ದುಪಡಿಸಬೇಕೆಂದು ಆಗ್ರಹಪಡಿಸಿದರು.

ಇಂದಿರಾ ಕ್ಯಾಂಟೀನ್‌ಗಳಿಗೆ ನೇಮಕಗೊಂಡ 468 ಮಾರ್ಷಲ್‌ಗಳ ಕಾರ್ಯವೈಖರಿ ಪರಿಶೀಲಿಸಲು 32 ಮಂದಿ ಜೆಓಸಿಗಳನ್ನು ಹಾಗೂ ಇಂದಿರಾ ಕ್ಯಾಂಟೀನ್ ಸೆಲ್‌ಗೆ ಮುಖ್ಯಸ್ಥರಾಗಿ ಒಬ್ಬ ಮುಖ್ಯ ಅಧಿಕಾರಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಲಾಗಿದೆ ಎಂದು ಅವರು ಆರೋಪಿಸಿದರು.

ಲೋಕಾಯುಕ್ತಕ್ಕೆ ದೂರು: ಇಂದಿರಾ ಕ್ಯಾಂಟೀನ್ ಮತ್ತು ತ್ಯಾಜ್ಯ ಸಂಸ್ಕರಣ ಘಟಕಗಳಿಗೆ ಭದ್ರತೆ ಒದಗಿಸುವ ಮಾರ್ಷಲ್‌ಗಳ ನೇಮಕದಲ್ಲಿ ಆಗಿರುವ ಹಗರಣವನ್ನು ತನಿಖೆ ನಡೆಸುವಂತೆ ಎಸಿಎಂ ನ್ಯಾಯಾಲಯ ಎಸಿಬಿ, ಬಿಎಂಟಿಎಫ್, ಲೋಕಾಯುಕ್ತದಲ್ಲಿ ದೂರು ಸಲ್ಲಿಸಲಾಗಿದೆ. ಪಾಲಿಕೆಯ ಹಣಕಾಸು ವಿಭಾಗದ ಹಿಂದಿನ ವಿಶೇಷ ಆಯುಕ್ತ ಮನೋಜ್ ರಾಜನ್ ಮತ್ತು ಸಂಸ್ಥೆಯ ಮುಖ್ಯಸ್ಥ ವಿ.ಬಸವರಾಜ್ ಅವರ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News