ನಿವೃತ್ತ ನೌಕರರಿಗೂ ಜೀವ ವಿಮಾ ಸೌಲಭ್ಯ ನೀಡುವಂತೆ ಎಐಬಿಆರ್‌ಎಎಫ್ ಆಗ್ರಹ
ಬೆಂಗಳೂರು, ಫೆ.19: ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್ ನೌಕರರಿಗೆ ನೀಡುತ್ತಿರುವ ಜೀವ ವಿಮಾ ಸೌಲಭ್ಯವನ್ನು ನಿವೃತ್ತ ನೌಕರರಿಗೂ ನೀಡಬೇಕೆಂದು ಅಖಿಲ ಭಾರತೀಯ ಬ್ಯಾಂಕ್ ನಿವೃತ್ತ ನೌಕರರ ಸಂಘದ ರಾಷ್ಟ್ರೀಯ ಸಂಚಾಲಕ ಸನ್ಯಲ್ ಒತ್ತಾಯಿಸಿದ್ದಾರೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ವರ್ಷಗಳಿಂದ ಮೂಲ ವೇತನ ಪಿಂಚಣಿಯನ್ನು ಪರಿಷ್ಕರಿಸಿಲ್ಲ. 2016 ರಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಗ್ರಾಚ್ಯುಟಿ ನೀಡಿಲ್ಲ. ಹೀಗಾಗಿ, ಹೊಸ ಪಿಂಚಣಿ ಪದ್ಧತಿಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಪದ್ಧತಿಯನ್ನು ಜಾರಿಗೊಳಿಸಿ ಎಂದು ಆಗ್ರಹಿಸಿದರು.
ದೇಶದಾದ್ಯಂತ 5.6 ಲಕ್ಷ ಜನ ಬ್ಯಾಂಕ್ ನಿವೃತ್ತ ನೌಕರರಿದ್ದಾರೆ. ನೌಕರರಿಗೆ ಪಿಂಚಣಿ ಪರಿಷ್ಕರಣೆಯಾಗದೆ ಅವರೆಲ್ಲರ ಜೀವನ ಅತಂತ್ರವಾಗಿದೆ. ನೌಕರರಿಗೆ ಪಿಂಚಣಿ ಪರಿಷ್ಕರಣೆಗೊಳಿಸಿ, ಕುಟುಂಬ ಪಿಂಚಣಿಯನ್ನು ಶೇ.15 ರಿಂದ ಶೇ.30ಕ್ಕೆ ಏರಿಕೆ ಮಾಡಬೇಕು. ವಿಆರ್‌ಎಸ್ ತೆಗೆದುಕೊಂಡವರಿಗೆ ಸರಿಯಾಗಿ ಪಿಂಚಣಿ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಹಲವು ಬಾರಿ ಸರಕಾರಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ಪ್ರಸ್ತುತವಿರುವ ಪಿಂಚಣಿ ದರವನ್ನು ಪರಿಷ್ಕರಣೆಗೊಳಿಸಿ ನಿವೃತ್ತ ನೌಕರರಿಗೆ ಕೇಂದ್ರ ಹಣಕಾಸು ಸಚಿವಾಲಯ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.