×
Ad

ಪ್ರತಿಯೊಬ್ಬರೂ ಚುನಾವಣಾ ಪ್ರಕ್ರಿಯೆಯ ಭಾಗವಾಗಬೇಕು: ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ

Update: 2019-02-19 22:20 IST

ಬೆಂಗಳೂರು, ಫೆ.19: ಮುಂಬರುವ 2019ರ ಲೋಕಸಭಾ ಚುನಾವಣೆಯು ಎಲ್ಲರನ್ನು ಒಳಗೊಂಡು ಅಭಿವೃದ್ಧಿ ಮತ್ತು ಪ್ರಗತಿ ಕಡೆಗೆ ಕೊಂಡೊಯ್ಯಲಿದ್ದು ಪ್ರತಿಯೊಬ್ಬ ನಾಗರಿಕರೂ ಈ ಪ್ರಕ್ರಿಯೆಯ ಭಾಗವಾಗಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಹೇಳಿದ್ದಾರೆ.

ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ ಚಾವ್ಲಾ ಅವರ ‘ಎವರಿ ಓಟ್ ಕೌಂಟ್ಸ್: ದಿ ಸ್ಟೋರಿ ಆಫ್ ಇಂಡಿಯಾಸ್ ಎಲೆಕ್ಷನ್ಸ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಪ್ರಕ್ರಿಯೆಯಾಗಿರುವ ಚುನಾವಣೆಗಳು ಅತ್ಯಂತ ಮಹತ್ವವಾದುದಾಗಿದೆ. ಇದರಲ್ಲಿ ಎಲ್ಲರ ಭಾಗವಹಿಸುವಿಕೆ ಅತಿಮುಖ್ಯ ಎಂದು ಅಭಿಪ್ರಾಯಿಸಿದರು.

ಸ್ವಾತಂತ್ರ ಬಂದಾಗಿನಿಂದ ಅನೇಕ ಸವಾಲುಗಳಿದ್ದರೂ ದಣಿವಿಲ್ಲದೆ ನ್ಯಾಯಯುತ ಚುನಾವಣೆಯ ಖಾತ್ರಿ ಮಾಡುವತ್ತ ಕೆಲಸ ಮಾಡುತ್ತಿರುವ ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಗೌರವ ಈ ಕೃತಿಯಾಗಿದೆ. ಇದು ಆಕರ್ಷಕ ಮಾಹಿತಿ ಪೂರ್ಣ ನೋಟವನ್ನು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದಲ್ಲಿ ಚುನಾವಣೆ ವ್ಯವಸ್ಥೆ ಕಾರ್ಯದ ಕುರಿತು ಸಂಪೂರ್ಣ ಮಾಹಿತಿ ಬಗ್ಗೆ ನಮಗೆ ನೀಡುತ್ತದೆ ಎಂದು ಹೇಳಿದರು.

2019ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವಂತೆ ಚುನಾವಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಕಾಳಜಿ ಹೊಂದಿರುವ ಪ್ರತಿಯೊಬ್ಬ ಭಾರತೀಯರು ಕಡ್ಡಾಯವಾಗಿ ಓದಬೇಕಾದ ಕೃತಿ ಇದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಚುನಾವಣಾ ಆಯೋಗದ ಮುಂದಿನ ಸವಾಲುಗಳು ಅನೇಕವಿದೆ. ನಮ್ಮ ಕಾನೂನು ರೂಪಿಸುವವರು ಬಹುತೇಕರು ಕಾನೂನು ಮುರಿಯುವವರೇ ಆಗಿರುವಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಹೇಗೆ ನಡೆಸುವುದು? ನೀತಿ ಸಂಹಿತೆ ಪರಿಣಾಮಕಾರಿಯೇ? ಮಾವೋವಾದಿಗಳ ಪರಿಣಾಮ ಇರುವ ಕ್ಷೇತ್ರಗಳಲ್ಲಿ ಹೇಗೆ ಚುನಾವಣೆ ನಡೆಸುವುದು ಅಥವಾ ಜಮ್ಮು ಮತ್ತು ಕಾಶ್ಮೀರದಂತಹ ಪ್ರಕ್ಷುಬ್ಧ ಸ್ಥಳಗಳಲ್ಲಿ ಹೇಗೆ ಚುನಾವಣೆ ನಡೆಸುವುದು? ಎಲೆಕ್ಟ್ರಾನಿಕ್ ಮತ ಯಂತ್ರಗಳು ಎಷ್ಟು ನಂಬಿಕಾರ್ಹ? ಕಡ್ಡಾಯ ಮತದಾನವನ್ನು ಅನುಷ್ಠಾನಗೊಳಿಸುವುದು ಸಾಧ್ಯವೇ? ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಒಂದೇ ಸಮಯದಲ್ಲಿ ಚುನಾವಣೆ ನಡೆಸುವುದರಿಂದ ಕೆಲಸ ಸುಲಭವಾಗುವುದೇ? ಎಂಬ ಅಂಶಗಳನ್ನು ಪುಸ್ತಕ ಒಳಗೊಂಡಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್‌ ಕುಮಾರ್, ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ಕರ್ನಾಟಕ ಸರಕಾರದ ವಿಶೇಷ ಅಧಿಕಾರಿ ಮನೋಜ್ ರಾಜನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News