ಏರೋ ಇಂಡಿಯಾ-2019: ಸಾವಿನ ಸೂತಕದ ನಡುವೆ ವೈಮಾನಿಕ ಪ್ರದರ್ಶನಕ್ಕೆ ಫೆ.20 ರಂದು ಚಾಲನೆ

Update: 2019-02-19 16:57 GMT

ಬೆಂಗಳೂರು, ಫೆ.19: ಇಂದಿನಿಂದ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ-2019 ವಿದ್ಯುಕ್ತವಾಗಿ ಆರಂಭಗೊಳ್ಳುತ್ತಿದೆ. ಆದರೆ, ಮಂಗಳವಾರ ತಾಲೀಮಿನ ವೇಳೆ ಸೂರ್ಯಕಿರಣ ವಿಮಾನ ಪತನಗೊಂಡು ಓರ್ವ ಪೈಲಟ್ ಸಾವನ್ನಪ್ಪಿರುವುದು ವೈಮಾನಿಕ ಪ್ರದರ್ಶನಕ್ಕೆ ಸೂತಕ ಚಾಯೆ ಆವರಿಸಿದೆ.

ದೇಶದ ರಕ್ಷಣಾ ಇಲಾಖೆಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 12ನೆ ಆವೃತ್ತಿ ನಾಳೆಯಿಂದ(ಬುಧವಾರ) ಯಲಹಂಕ ವಾಯುನೆಲೆಯಲ್ಲಿ ಆರಂಭವಾಗಲಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.(ಎಚ್‌ಎಎಲ್) ಈ ಕಾರ್ಯಕ್ರಮದ ಸಂಪೂರ್ಣ ಹೊಣೆಗಾರಿಕೆಯಲ್ಲಿ ಹೊತ್ತುಕೊಂಡಿದೆ.

ಫೆ.20 ರಿಂದ 24ರವರೆಗೆ ನಡೆಯಲಿರುವ ಲೋಹಕ ಹಕ್ಕಿಗಳ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡುವರು. ವಸ್ತುಪ್ರದರ್ಶನಕ್ಕೆ ಅಗತ್ಯವಿರುವ ಮಳಿಗೆಗಳು, ವೈಮಾನಿಕ ಪ್ರದರ್ಶನವನ್ನು ಕುಳಿತು ವೀಕ್ಷಿಸಲು ಅನುಕೂಲವಾಗುವಂತೆ ಆಸನಗಳ ವ್ಯವಸ್ಥೆ, ರನ್ ವೇಗಳ ಸಿದ್ಧತೆ, ವಿಚಾರ ಸಂಕಿರಣಕ್ಕೆ ವ್ಯವಸ್ಥೆ ಹೀಗೆ ವೈಮಾನಿಕ ಪ್ರದರ್ಶನಕ್ಕೆ ಅಗತ್ಯವಾದ ಎಲ್ಲ ತಯಾರಿಗಳು ಪೂರ್ಣಗೊಂಡಿವೆ. ವಿಮಾನಗಳ ಚಿತ್ತಾಕರ್ಷಕ ಪ್ರದರ್ಶನದ ಜೊತೆಗೆ ವಿಚಾರ ಸಂಕಿರಣ, ವಿಮಾನ ಖರೀದಿ, ಮಾರಾಟ ಒಪ್ಪಂದಗಳ ಸಭೆ ಸಮಾಲೋಚನೆಗಳು ನಡೆಯಲಿವೆ. ಈ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ರಕ್ಷಣಾ ಕ್ಷೇತ್ರದ ವಸ್ತು ಪ್ರದರ್ಶನ ಆಯೋಜಿಸಲಾಗಿದ್ದು, ಇದರಲ್ಲಿ ವಿದೇಶಗಳ ಹಲವು ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಆನ್ಲೈನ್ ಟಿಕೆಟ್: ಈ ವೈಮಾನಿಕ ಪ್ರದರ್ಶನಕ್ಕೆ ಆನ್‌ಲೈನ್‌ಗಳಲ್ಲಿ ಟಿಕೆಟ್ ಖರೀದಿಸಬಹುದಾಗಿದ್ದು, ವೈಮಾನಿಕ ಪ್ರದರ್ಶನ ನಡೆಯಲಿರುವ ಯಲಹಂಕ ವಾಯು ನೆಲೆಯ ಸ್ಥಳದಲ್ಲೂ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರದರ್ಶನದಲ್ಲಿ ಪಾಲ್ಗೊಳ್ಳವವರಿಗೆ ಅಗತ್ಯವಿರುವ ಫುಡ್‌ಕೋರ್ಟ್, ಕುಡಿಯುವ ನೀರು ಸೇರಿದಂತೆ ಅಗತ್ಯವಾದ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ.

ಬಿಗಿ ಭದ್ರತೆ: ವೈಮಾನಿಕ ಪ್ರದರ್ಶನಕ್ಕೆ ದೇಶ-ವಿದೇಶಗಳಿಂದ ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಸುಮಾರು 3700ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರ ಜತೆಗೆ ವಾಯು ನೆಲೆಯ ಒಳಗೆ ಕೈಗಾರಿಕಾ ಭದ್ರತಾ ಪಡೆ ಹಾಗೂ ವಾಯು ಸೇನೆಯ ರಕ್ಷಣಾ ಸಿಬ್ಬಂದಿಯೂ ಭದ್ರತಾ ಕಾರ್ಯಗಳನ್ನು ನೋಡಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News