ಹಿರಿಯ ವಕೀಲ ಸ್ಥಾನಮಾನ ನೀಡಿ ಹೊರಡಿಸಿದ್ದ ಅಧಿಸೂಚನೆ: ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ನೋಟಿಸ್ ಜಾರಿ

Update: 2019-02-19 17:01 GMT

ಬೆಂಗಳೂರು, ಫೆ.19: ಕಳೆದ ವರ್ಷ 18 ಮಂದಿ ವಕೀಲರಿಗೆ ಹಿರಿಯ ವಕೀಲ (ಡೆಸಿಗ್ನೇಟೆಡ್ ಸೀನಿಯರ್ ಕೌನ್ಸೆಲ್) ಸ್ಥಾನಮಾನ ನೀಡಿ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ವಿಭಾಗೀಯ ನ್ಯಾಯಪೀಠ ನೋಟಿಸ್ ಜಾರಿಗೊಳಿಸಲಾಗಿದೆ.

ಅಧಿಸೂಚನೆ ರದ್ದು ಕೋರಿ ಪುತ್ತಿಗೆ ಆರ್. ರಮೇಶ್ ಸೇರಿ ನಾಲ್ವರು ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ನೋಟಿಸ್ ಜಾರಿಗೊಳಿಸಿತು. ಹಾಗೆಯೇ, ಹಿರಿಯ ವಕೀಲರ ಪದೋನ್ನತಿ ಸಮಿತಿ ಹಾಗೂ ನೂತನವಾಗಿ ಹಿರಿಯ ವಕೀಲ ಸ್ಥಾನಮಾನ ಪಡೆದ 17 ವಕೀಲರಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.

ಇದೇ ವೇಳೆ ಹಿರಿಯ ವಕೀಲರ ಆಯ್ಕೆ ಸಂದರ್ಭದಲ್ಲಿ ನೀಡಲಾಗಿರುವ ಅಂಕಗಳ ಮರು ಮೌಲ್ಯಮಾಪನ ನಡೆಸಲು ನಿರ್ದೇಶಿಸುವಂತೆ ಕೋರಿ ವಕೀಲ ಜಿ.ಆರ್. ಮೋಹನ್ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಹಾಗೂ ಹೈಕೋರ್ಟ್‌ನ ಶಾಶ್ವತ ಸಚಿವಾಲಯ ವಿಭಾಗದ ಕಾರ್ಯದರ್ಶಿಗೆ ನ್ಯಾಯಪೀಠವು ನೋಟಿಸ್ ಜಾರಿಗೊಳಿಸಿದೆ.

ರಾಜ್ಯ ಹೈಕೋರ್ಟ್‌ನಲ್ಲಿ ವಕೀಲಿಕೆ ಮಾಡುತ್ತಿರುವ 18 ವಕೀಲರಿಗೆ ಹಿರಿಯ ವಕೀಲರ ಸ್ಥಾನಮಾನ ನೀಡಿ 2018ರ ನ.16ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ಅಧಿಸೂಚನೆ ಪ್ರಶ್ನಿಸಿರುವ ವಕೀಲ ಪುತ್ತಿಗೆ ರಮೇಶ್ ಹಾಗೂ ಇತರರು, ಹಿರಿಯ ವಕೀಲರ ಪದೋನ್ನತಿಯ ಆಯ್ಕೆ ವೇಳೆ ಅನುಸರಿಸಲಾಗಿರುವ ನಿಯಮಗಳ ಕುರಿತ ದಾಖಲೆಗಳನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಆರ್‌ಟಿಐ ಕಾಯ್ದೆ ಅಡಿಯಲ್ಲೂ ಯಾವುದೇ ಮಾಹಿತಿ ಒದಗಿಸಿಲ್ಲ. ನಾಲ್ವರು ವಕೀಲರ ಹೆಸರನ್ನು ಪದೋನ್ನತಿಗೆ ಶಿಫಾರಸು ಮಾಡಿದ್ದ ರಾಜ್ಯ ಅಡ್ವೊಕೇಟ್ ಜನರಲ್ ಆಯ್ಕೆ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು ಸರಿಯಲ್ಲ ಎಂದು ದೂರಿದ್ದಾರೆ.

ಅಲ್ಲದೆ, ನೂತನವಾಗಿ ವಕೀಲರಿಗೆ ಹಿರಿಯ ವಕೀಲ ಪಟ್ಟ ನೀಡಿ 2018ರ ನ.16ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News