ಪರೀಕ್ಷಾ ಪರ್ವ: ಒತ್ತಡ ಬೇಡ ಆತ್ಮ ಸ್ಥೈರ್ಯ ಬೇಕು

Update: 2019-02-19 18:37 GMT

ಪರೀಕ್ಷಾರ್ಥಿ ವಿದ್ಯಾರ್ಥಿಗಳು ಬಹುಮುಖಿ ಒತ್ತಡಕ್ಕೆ ಒಳಗಾಗುತ್ತಾರೆ. ಹೆತ್ತವರು, ಶಿಕ್ಷಕರು, ಹಿತ ಚಿಂತಕರೆಲ್ಲರೂ ವಿದ್ಯಾರ್ಥಿ ಪಾಸಾಗಬೇಕೆಂದು ಬಯಸಿರುತ್ತಾರೆ. ಕೆಲವೊಮ್ಮೆ ವಿದ್ಯಾರ್ಥಿಯ ನೈಜ ಸಾಮರ್ಥ್ಯಕ್ಕಿಂತ ಹೆಚ್ಚಿನ ನಿರೀಕ್ಷೆಯ ಭಾರವನ್ನು ವಿದ್ಯಾರ್ಥಿಯ ಮೇಲೆ ಹೊರಿಸಿ ಸಾಧನೆಯ ಹಾದಿಯಲ್ಲಿ ಹಿಮ್ಮುಖವಾಗುವಂತೆ ಮಾಡುವುದು ಕೂಡಾ ಕಂಡುಬರುತ್ತದೆ. ವಿದ್ಯಾರ್ಥಿಗಳು ಕಲಿಕೆಯನ್ನು ಸಹಜವಾಗಿ, ಅನುಭವಿಸಿ, ಆನಂದಿಸಿ, ಕಲಿಯಬೇಕಾದ ಅಗತ್ಯವಿದೆ. ಕಲಿಕೆ, ಓದು-ತಯಾರಿ ಕೇವಲ ಪುಸ್ತಕ-ನೋಟ್ಸ್‌ಗಳ ಓದಿಗೆ, ಕಣ್ಣೋಡಿಸುವಿಕೆಗೆ ಸೀಮಿತವಾಗದೆ ಚಟುವಟಿಕೆನಿರತ ಕಲಿಕೆಯಲ್ಲಿ ತೊಡಗಬೇಕು. ಇದರಿಂದ ಕಲಿಕೆ ಸಂತಸದಾಯಕವಾಗುತ್ತದೆ.
ಪಾಲಕರೇ, ಪರೀಕ್ಷೆಯ ಸಮಯದಲ್ಲಿ ನಿಮ್ಮ ಮಕ್ಕಳಿಗೆ ನೀವು ಹಾಕಬೇಕಾದುದು ಒತ್ತಡವನ್ನಲ್ಲ ಬದಲಾಗಿ ಆತ್ಮಸ್ಥೈರ್ಯ ತುಂಬುವ ಮಾತುಗಳನ್ನು. ಪರೀಕ್ಷಾ ವಿಷಯಗಳನ್ನು ತಿಳಿ ಹೇಳಲು ನಿಮಗೆ ಕಷ್ಟಕರವಿರಬಹುದು. ಎಸೆಸೆಲ್ಸಿ, ಪಿಯುಸಿಯ ವಿಷಯಗಳನ್ನು ಹೆಚ್ಚಿನ ಪಾಲಕರು ತಮ್ಮ ಮಕ್ಕಳಿಗೆ ಹೇಳಿಕೊಡಬಲ್ಲರು ಎಂದು ಹೇಳಲಾಗದು. ಆದರೆ ವಿದ್ಯಾರ್ಥಿಗಳಿಗೆ ಅನುಕೂಲಿಗಳಾಗಿ ನೀವು ಬದಲಾಗಬೇಕಾಗಿದೆ. ಮನೆಯಲ್ಲಿ ಪಾಲಕರ ನಡುವಿನ ಗೊಂದಲಗಳು, ಜಗಳ, ಅತಿಯಾದ ಮಾತು, ದುಶ್ಚಟಗಳು ಕೂಡಾ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಮನೆಯಲ್ಲಿ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕಾದುದು ಪಾಲಕರ ಅತೀ ಮುಖ್ಯ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಓದಲು-ಬರೆಯಲು ಅಥವಾ ಬರೆದು ಕಲಿಯಲು, ಬಿಡಿಸಿ ಕಲಿಯಲು ತೊಡಗಿದಾಗ ಅವರ ಗಮನವನ್ನು ಸೆಳೆಯುವಂತಹ ಯಾವುದೇ ಮಾತುಗಳನ್ನು ಆಡಬಾರದು. ಪತಿ-ಪತ್ನಿ ವಿರಸ, ಹಿರಿಯ ಮಕ್ಕಳ ಭಿನ್ನಾಭಿಪ್ರಾಯ, ನೆರೆ ಹೊರೆಯವರೊಡನಿರುವ ಅತಿಯಾದ ಸರಸ ವಿರಸಗಳು ಕೂಡ ಮನೆ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹೆತ್ತವರು ತಮ್ಮ ಮಕ್ಕಳಿಗೆ ಮಾರ್ಗದರ್ಶಕರಾಗಿ ಕಲಿಕಾ ವಾತಾವರಣ ಕಲ್ಪಿಸಿಕೊಡುವ ಅನುಕೂಲಿಗಳಾಗಿ, ಮಾನಸಿಕ ಧೈರ್ಯ ತುಂಬುವ ಅನುಭಾವಿಗಳಾಗಿ ಕಾರ್ಯ ನಿರ್ವಹಿಸಿದರೆ ವಿದ್ಯಾರ್ಥಿಗಳಿಗೆ ಯಶಸ್ಸು ಖಚಿತ.

Writer - -ಎ.ಆರ್.ಅನಂತಾಡಿ

contributor

Editor - -ಎ.ಆರ್.ಅನಂತಾಡಿ

contributor

Similar News