ಮಂಗಳೂರಿನಲ್ಲಿ ಡಿಫೆನ್ಸ್ ಕ್ಲಸ್ಟರ್ ಸ್ಥಾಪನೆ: ಎಚ್.ಡಿ.ಕುಮಾರಸ್ವಾಮಿ

Update: 2019-02-20 12:54 GMT

ಬೆಂಗಳೂರು, ಫೆ.20: ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವ ಮನ್ನಣೆ ಗಳಿಸುತ್ತಿದ್ದು, ಇದಕ್ಕೆ ಪೂರಕವಾಗಿ ಮಂಗಳೂರಿನಲ್ಲಿ ಡಿಫೆನ್ಸ್ ಕ್ಲಸ್ಟರ್ ಸ್ಥಾಪಿಸುವ ಉದ್ದೇಶವಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬುಧವಾರ ಯಲಹಂಕ ವಾಯು ನೆಲೆಯಲ್ಲಿ ಏರೋ ಇಂಡಿಯಾ-2019 ವೈಮಾನಿಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನ ದೇವನಹಳ್ಳಿಯ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ವೈಮಾನಿಕ ಪಾರ್ಕ್ ಸ್ಥಾಪಿಸಲಾಗಿದೆ. ಹಾಗೂ ಡಸೌಲ್ಟ್ ಕಂಪೆನಿ ಸಹಯೋಗದೊಂದಿಗೆ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಕೇಂದ್ರ ಸಚಿವ ಸುರೇಶ್ ಪ್ರಭು ಮಾತನಾಡಿ, ದೇಶದಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಉಡಾನ್ ಯೋಜನೆ ಮೂಲಕ ದೇಶದ ಉದ್ದಗಲಕ್ಕೂ ವಿಮಾನ ಸೇವೆ ವಿಸ್ತರಣೆಗೆ ಅವಕಾಶವಾಗಿದೆ. 2040ಕ್ಕೆ ಭಾರತವು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಪ್ರಥಮ ಸ್ಥಾನ ಪಡೆಯುವ ಗುರಿ ಇದೆ. ಮುಂದಿನ ದಿನಗಳಲ್ಲಿ ದೇಶವು 2300 ವಿಮಾನಗಳ ಖರೀದಿಸುವ ಉದ್ದೇಶವಿದೆ ಎಂದು ತಿಳಿಸಿದರು. ಉದ್ಘಾಟನೆಗೂ ಮುನ್ನ ಮಂಗಳವಾರ(ಫೆ.19) ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ಸಾಹಿಲ್ ಗಾಂಧಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News