ತಮಿಳುನಾಡು, ಉತ್ತರಪ್ರದೇಶದಲ್ಲಿ ರಕ್ಷಣಾ ಕೈಗಾರಿಕಾ ಕಾರಿಡಾರ್: ನಿರ್ಮಲಾ ಸೀತಾರಾಮನ್

Update: 2019-02-20 14:44 GMT

ಬೆಂಗಳೂರು, ಫೆ.20: ದೇಶದಲ್ಲಿ ರಕ್ಷಣಾ ಕೈಗಾರಿಕೆಯನ್ನು ಉತ್ತೇಜಿಸಲು ತಮಿಳುನಾಡು ಹಾಗೂ ಉತ್ತರ ಪ್ರದೇಶದಲ್ಲಿ 2 ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬುಧವಾರ ಯಲಹಂಕ ವಾಯು ನೆಲೆಯಲ್ಲಿ ಏರೋ ಇಂಡಿಯಾ-2019 ವೈಮಾನಿಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ತುಮಕೂರಿನಿಂದ ತಮಿಳುನಾಡಿನ ಹೊಸೂರು ಮೂಲಕ ಚೆನ್ನೈ ತಲುಪುವ ಒಂದು ಕಾರಿಡಾರ್ ಮತ್ತು ಉತ್ತರ ಪ್ರದೇಶದಲ್ಲಿ ಮತ್ತೊಂದು ಕಾರಿಡಾರನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಭಾರತದಲ್ಲಿ ರಕ್ಷಣಾ ಉತ್ಪಾದನಾ ವಲಯದಲ್ಲಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣವಿದೆ. ಶೇ.100ರಷ್ಟು ನೇರ ಹೂಡಿಕೆಗೆ(ಎಫ್‌ಡಿಎ) ಅನುಮತಿ ನೀಡಿದ ಬಳಿಕ ಭಾರತ ಹೆಲಿಕಾಪ್ಟರ್, ಲಘು ವಿಮಾನ ಸೇರಿದಂತೆ 4ಸಾವಿರ ವಿಮಾನಗಳನ್ನು ತಯಾರಿಸಿದೆ. ಹಾಗೂ ನೇಪಾಳ, ಮಾರಿಷಸ್, ರಷ್ಯ ಸೇರಿದಂತೆ ಹಲವು ದೇಶಗಳಿಗೆ ರಕ್ಷಣಾ ಸರಕುಗಳನ್ನು ರಫ್ತು ಮಾಡುತ್ತಿವೆ ಎಂದು ಅವರು ಹೇಳಿದರು.

ಲಘು ಹೆಲಿಕಾಪ್ಟರನ್ನು ನೇಪಾಳ ಮಾರಿಷಿಯಸ್‌ಗೆ ರಫ್ತು ಮಾಡಲಾಗಿದೆ. ಚೇತಕ್ ಹೆಲಿಕಾಪ್ಟರನ್ನು ಆಫ್ಘಾನಿಸ್ತಾನಕ್ಕೆ ರಫ್ತು ಮಾಡಲಾಗಿದೆ. ಫೈರ್ ಕಂಟ್ರೋಲ್ ವ್ಯವಸ್ಥೆಯ ಉಪಕರಣಗಳನ್ನು ಇಸ್ರೇಲ್‌ಗೆ ರಫ್ತು ಮಾಡಲಾಗಿದೆ. ಹೀಗೆ ಹಲವು ದೇಶಗಳಿಗೆ ಸ್ವದೇಶಿ ನಿರ್ಮಿತ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ ಎಂದು ಅವರು ಹೇಳಿದರು.

ರಫ್ತು ನೀತಿಯನ್ನು ಸರಳೀಕರಣಗೊಳಿಸಿರುವುದರಿಂದ ಸುಮಾರು 7138 ಕೋಟಿ ರೂ.ಗಳ ರಫ್ತು ವಹಿವಾಟನ್ನು ಸಾಧಿಸಲಾಗಿದೆ. ಮುಂದಿನ 2022-23 ವೇಳೆಗೆ ರಫ್ತು ವಹಿವಾಟನ್ನು ಶೇ.25 ರಷ್ಟು ಏರಿಸುವ ಗುರಿ ಹೊಂದಲಾಗಿದೆ. ಏಷ್ಯಾದಲ್ಲೇ ಅತ್ಯಂತ ದೊಡ್ಡ ವೈಮಾನಿಕ ಪ್ರದರ್ಶನವಾದ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾರತದ 600 ಕಂಪೆನಿಗಳು ಮತ್ತು ವಿದೇಶದ 200 ಕಂಪೆನಿಗಳು ಪಾಲ್ಗೊಂಡಿವೆ. ಈ ವೈಮಾನಿಕ ಪ್ರದರ್ಶನ ಶತಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಅವಕಾಶ ಒದಗಿಬರಲಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವರು ಏರೋ ಇಂಡಿಯಾ ಶೋದ ಇಂಡಿಯನ್ ಏರೋಸ್ಪೆಸ್ ಟೇಕಿಂಗ್ ಆಫ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಹಾಗೆಯೇ ಭಾರತದ ಸೇನಾ ಪಡೆಗಳ ವೈಮಾನಿಕ ಪ್ರಗತಿಯನ್ನು ಬಿಂಬಿಸುವ ಕಾಫಿ ಟೇಬಲ್ ಪುಸ್ತಕವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಕೇಂದ್ರದ ಸಚಿವರುಗಳಾದ ಸುರೇಶ್ ಪ್ರಭು, ಸದಾನಂದಗೌಡ ಸೇರಿದಂತೆ ಮೂರು ಸೇನಾ ಪಡೆಗಳ ಮುಖ್ಯಸ್ಥರು, ಕೇಂದ್ರದ ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳು, ರಾಜ್ಯ ಸರಕಾರದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News