ಏರ್ ಶೋ-2019ಕ್ಕೆ ಚಾಲನೆ: ನೀಲಾಕಾಶದಲ್ಲಿ ಚಿತ್ತಾರ ಬಿಡಿಸಿದ ಯುದ್ಧ ವಿಮಾನಗಳು

Update: 2019-02-20 14:39 GMT

ಬೆಂಗಳೂರು, ಫೆ.20: ಯಲಹಂಕದ ವಾಯುನೆಲೆಯಲ್ಲಿ ಬುಧವಾರದಿಂದ ಆರಂಭವಾಗಿರುವ ಪ್ರತಿಷ್ಠಿತ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2019ರಲ್ಲಿ ಭಾರತದ ಸೇನಾ ಪಡೆಯಗಳ ಯುದ್ಧ ವಿಮಾನಗಳು ನೀಲಾಕಾಶದಲ್ಲಿ ಆಕರ್ಷಕ ಕಸರತ್ತು ನಡೆಸುವ ಮೂಲಕ ದೇಶದ ವೈಮಾನಿಕ ಬೆಳವಣಿಗೆ, ಸಾಧನೆ ಹಾಗೂ ವಾಯು ಸೇನಾಪಡೆಯ ಶಕ್ತಿ ಸಾಮರ್ಥ್ಯವನ್ನು ಅನಾವರಣಗೊಳಿಸಿತು.

ಭಾರತದ ಯುದ್ಧ ವಿಮಾನಗಳು ಕೇವಲ ಯುದ್ಧಕ್ಕೆ ಮಾತ್ರ ಸೀಮಿತವಲ್ಲ. ಜನತೆಯ ಮನವನ್ನು ಮುದಗೊಳಿಸಬಲ್ಲವು ಎಂಬುದಕ್ಕೆ ಇಂದು ನಡೆದ ವೈಮಾನಿಕ ಪ್ರದರ್ಶನವೆ ಸಾಕ್ಷಿಯಾಯಿತು. ಬಾನಂಗಳದಲ್ಲಿ ಗಾಳಿ ಪಟದಂತೆ ಹಾರಾಡುತ್ತಾ ಬಣ್ಣ. ಬಣ್ಣಗಳ ಚಿತ್ತಾರಗಳನ್ನು ಮೂಡಿಸುತ್ತಾ ನೋಡುಗರನ್ನು ಪುಳಕಗೊಳಿಸಿದವು. ಭಾರತದ ಯುದ್ಧ ವಿಮಾನಗಳಾದ ಸುಖೋಯ್, ನೇತ್ರಾ, ತೇಜಸ್ ವಿಮಾನಗಳ ಹಾರಾಟ ಅತ್ಯಾಕರ್ಷಕವಾಗಿದ್ದವು. ಆಕಾಶದಿಂದ ಭೂಮಿಗೆ ಈ ವಿಮಾನ ಅಪ್ಪಳಿಸಿಬಿಟ್ಟಿತ್ತೇನೋ ಎನ್ನುವಷ್ಟರಲ್ಲಿ ಮತ್ತೆ ವಿಮಾನವನ್ನು ಆಕಾಶದತ್ತ ತಿರುಗಿಸುವ ಚಾಣಾಕ್ಷತನ ಉಲ್ಪಾಪಲ್ಟಾ ಹೊಡೆಯುತ್ತಾ ವಿಮಾನವನ್ನು ಹೇಗೆಂದರೆ ಹಾಗೆ ಸಿಡಿಸುತ್ತಾ ನಡೆದ ಪ್ರದರ್ಶನ ಪ್ರೇಕ್ಷಕರ ಎದೆಯನ್ನು ಕ್ಷಣಕಾಲ ಝಲ್ ಎನಿಸಿದವು. ಆಕರ್ಷಕ ಕಸರತ್ತು ನೀಡಿದ ಸೇನಾ ಪೈಲೆಟ್‌ಗಳು ತಮ್ಮ ವಿಮಾನಗಳನ್ನು ಆಟಿಕೆ ವಸ್ತುವಿನಂತೆ ಬಾನಂಗಳದಲ್ಲಿ ತಿರುಗಾಡಿಸುತ್ತಿದ್ದ ದೃಶ್ಯಗಳನ್ನು ನೋಡಿದ ಜನತೆ ಪೈಲಟ್‌ಗಳ ಸಾಹಸ, ಧೈರ್ಯವನ್ನು ಮುಕ್ತಕಂಠದಿಂದ ಅಭಿನಂದಿಸುತ್ತಲೆ ವಿಮಾನಗಳತ್ತ ಕೈಬೀಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News