ಕಾಂಗ್ರೆಸ್ ಕಡೆ ಹೋಗುವ ಪ್ರಶ್ನೆಯೇ ಇಲ್ಲ: ನಟ ಪ್ರಕಾಶ್ ರೈ

Update: 2019-02-20 14:48 GMT

ಬೆಂಗಳೂರು, ಫೆ.20: ಮುಂಬರುವ ಲೋಕಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಪ್ರಶ್ನೆಯೇ ನನ್ನ ಮುಂದಿಲ್ಲ ಎಂದು ಬಹುಭಾಷ ನಟ, ಚಿಂತಕ ಪ್ರಕಾಶ್ ರೈ ಇಂದಿಲ್ಲಿ ಹೇಳಿದರು.

ಬುಧವಾರ ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿರುವ ವ್ಯಕ್ತಿ. ಹೀಗಾಗಿ, ಯಾವ ಪಕ್ಷದಲ್ಲಿಯೂ ಗುರುತಿಸಿಕೊಳ್ಳುವ ಅಗತ್ಯ ಇಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಮುಖಂಡರು ಜಾತ್ಯತೀತ ತತ್ವದ ಆಧಾರದಲ್ಲಿ ಸಾಗುತ್ತಿದ್ದರೆ, ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಲಿ ಎಂದು ತಿಳಿಸಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಮುಖಗಳು. ಬಿಜೆಪಿ ಕಟು ಹಿಂದುತ್ವ ಸಿದ್ಧಾಂತ ಪಾಲಿಸಿದರೆ, ಕಾಂಗ್ರೆಸ್‌ನಲ್ಲಿ ಮೃದು ಹಿಂದುತ್ವ ಇದೆ. ಹೀಗಾಗಿ, ಕಾಂಗ್ರೆಸ್‌ನಲ್ಲಿದ್ದುಕೊಂಡು ಶೋಷಿತ ಸಮುದಾಯಗಳ ಪರ ಧ್ವನಿಗೂಡಿಸಲು ಸಾಧ್ಯವಿಲ್ಲ ಎಂದ ಅವರು, ಚುನಾವಣೆ ಸ್ಪರ್ಧೆಯಿಂದ ಹಿಂದೇಟು ಹಾಕುವ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ನುಡಿದರು.

ಲಾರಿಯಲ್ಲಿ ಎರಡು ಮೂರು ಸಾವಿರ ಜನರನ್ನು ಕರೆದುಕೊಂಡು ಬಂದು ಮಾಡುವ ರಾಜಕೀಯ ನನ್ನದಲ್ಲ. ಜನರ ಜೊತೆ ಸೇರಿ, ಅವರ ಸಲಹೆಯನ್ನು ತೆಗೆದುಕೊಂಡು ಮುಂದೆ ಸಾಗುವ ರಾಜಕಾರಣ ನನ್ನದು. ಹೀಗಾಗಿಯೇ, ಬೀದಿ ಬೀದಿಗೂ ಹೋಗಿ ಜನರ ನಡುವೆ ಬೆರೆತು ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಯಾರು ಎದುರಾಳಿ ಎನ್ನುವುದಕ್ಕಿಂತ, ಯಾರ ಪರವಾಗಿದ್ದೇವೆ ಎಂದು ಮಾತನಾಡೋಣ. ಗೆಲ್ಲುವುದು, ಸೋಲುವುದು ಎಂದು ಮಾತನಾಡಲು ಇದು ಕ್ರಿಕೆಟ್ ಆಟವಲ್ಲ. ಜನರು ಯಾವುದೇ ಪಕ್ಷವಲ್ಲ. ಐದು ವರ್ಷಗಳ ನಂತರ ಜನಪ್ರತಿನಿಧಿಗಳನ್ನು ಆರಿಸಿದ ಬಳಿಕ ಅವರದ್ದೇ ಆದ ಕೆಲಸಗಳಿವೆ. ಕೆಲಸ ಮಾಡಿ ಎಂದು ನಮಗೆ ಜವಾಬ್ದಾರಿ ನೀಡುತ್ತಾರೆ ಎಂದರು.

‘ಮುಸಿಮರು ಹೆಚ್ಚಿರುವ ಕಡೆ ಮೀಸಲಾತಿ’

 ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ಕಡೆ ರಾಜಕೀಯ ಮೀಸಲಾತಿ ತರಲಾಗಿದೆ. ಈ ಬಗ್ಗೆ ನ್ಯಾ.ರಾಜೇಂದ್ರ ಸಾಚಾರ್ ವರದಿಯಲ್ಲಿ ಉಲ್ಲೇಖವಾಗಿದೆ. ಈ ವರದಿಯನ್ನು ಕಾಳಜಿಯಿಂದ ಅನುಷ್ಠಾನ ಮಾಡಿದಲ್ಲಿ ಮಾತ್ರ ಮುಸ್ಲಿಮ್ ಸಮುದಾಯ ಸಮಗ್ರ ಅಭಿವೃದ್ಧಿ ಕಡೆ ಮುಖ ಮಾಡಲು ಸಾಧ್ಯ.

-ಪ್ರಕಾಶ್ ರಾಜ್, ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News