ನನ್ನನ್ನು ಯಾರೂ ಅಕ್ರಮ ಬಂಧನದಲ್ಲಿಟ್ಟುಕೊಂಡಿಲ್ಲ: ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ ಶಾಸಕ ಕುಮಟಳ್ಳಿ

Update: 2019-02-20 15:17 GMT

ಬೆಂಗಳೂರು, ಫೆ.20: ಅಥಣಿ ಶಾಸಕರನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದು, ಅವರನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ನ್ಯಾಯಪೀಠದ ಎದುರು ಖುದ್ದು ಹಾಜರಾಗಿ ನನ್ನನ್ನು ಯಾರೂ ಬಂಧಿಸಿಲ್ಲ ಎಂದು ಪ್ರಮಾಣ ಪತ್ರವನ್ನು ಸಲ್ಲಿಸಿದ್ದರಿಂದ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

ಬೆಳಗಾವಿ ಜಿಲ್ಲೆ ಅಥಣಿಯ ವಕೀಲ ಹಾಗೂ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಮೋದ ದಯಾನಂದ ಹಿರೇಮನಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹಾಗೂ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಯಾರೂ ಅಕ್ರಮ ಬಂಧನದಲ್ಲಿಟ್ಟುಕೊಂಡಿಲ್ಲ. ಅವರೆ ಸ್ವಇಚ್ಛೆಯಿಂದ ಮುಂಬೈಗೆ ಹೋಗಿದ್ದರು ಎಂಬ ಪ್ರಮಾಣಪತ್ರವನ್ನು ರಾಜ್ಯ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರು ನ್ಯಾಯಪೀಠಕ್ಕೆ ಸಲ್ಲಿಸಿದರು. ಇದೇ ವೇಳೆ ಅರ್ಜಿದಾರನಿಗೆ ಬಾರಿ ದಂಡ ವಿಧಿಸುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠವು ದಂಡ ವಿಧಿಸುವ ಕುರಿತು 27ಕ್ಕೆ ವಿಚಾರಣೆಯನ್ನು ಮುಂದೂಡಿತು.

ಪ್ರಕರಣವೇನು: ಫೆ.7ರಂದು ಅರ್ಜಿದಾರರಾದ ಪ್ರಮೋದ್ ದಯಾನಂದ ಅವರು ಅಥಣಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಆದರೆ, ದೂರು ಸ್ವೀಕರಿಸಿದ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ. ಬದಲಿಗೆ ಮಹೇಶ ಕುಮಟಳ್ಳಿಯವರು ವಿಧಾನಸಭೆಯ ಬಜೆಟ್ ಅಧಿವೇಶನಕ್ಕೆ ಹಾಜರಾಗಲು ಬೆಂಗಳೂರಿನಲ್ಲಿ ಇರಬಹುದು ಎಂದು ಉತ್ತರ ನೀಡಿದರು. ಅದಕ್ಕಾಗಿ ಅರ್ಜಿದಾರರು ತಕ್ಷಣ ಬೆಂಗಳೂರಿಗೆ ಆಗಮಿಸಿ ಶಾಸಕರ ಭವನಕ್ಕೆ ಬಂದು ನೋಡಿದರೆ ಅಲ್ಲಿ ಶಾಸಕರು ಸಿಕ್ಕಿಲ್ಲ. ಇದೇ ವೇಳೆ ಅರ್ಜಿದಾರರರು ರಮೇಶ ಜಾರಕಿಹೊಳಿಯವರ ಕುರಿತು ವಿಚಾರಿಸಿದರೆ ಅವರ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ. ಹೀಗಾಗಿ, ಅಕ್ರಮ ಬಂಧನದಲ್ಲಿರುವ ಶಾಸಕ ಮಹೇಶ ಕುಮಟಳ್ಳಿ ಅವರನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಮತ್ತು ಈ ವಿಚಾರವಾಗಿ ರಮೇಶ ಜಾರಕಿಹೊಳಿ ಅವರನ್ನು ತಕ್ಷಣ ವಿಚಾರಣೆಗೊಳಪಡಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News