ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣ: ಎಸಿಬಿಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್

Update: 2019-02-20 15:18 GMT

ಬೆಂಗಳೂರು, ಫೆ.20: ವಿಧಾನಸೌಧ ಪಶ್ಚಿಮ ದ್ವಾರದ ಬಳಿ ದಾಖಲೆ ಇಲ್ಲದ 25.76 ಲಕ್ಷ ರೂ. ಹಣ ಪತ್ತೆಯಾದ ಪ್ರಕರಣದ ಆರೋಪಿ ಮೋಹನ್ ಸಲ್ಲಿಸಿರುವ ಜಾಮೀನು ಅರ್ಜಿಯ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.

ಜಾಮೀನು ಅರ್ಜಿ ವಜಾಗೊಳಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸಚಿವ ಪುಟ್ಟರಂಗ ಶೆಟ್ಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಬುಧವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎ. ಪಾಟೀಲ್ ಅವರಿದ್ದ ಪೀಠ, ಪ್ರತಿವಾದಿಯಾದ ಎಸಿಬಿಗೆ ನೋಟಿಸ್ ಜಾರಿಗೊಳಿಸಿತು. ಅರ್ಜಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿತು.

ಪ್ರಕರಣವೇನು: ಜ.4ರಂದು ವಿಧಾನಸೌಧ ಆವರಣದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಅವರ ಟೈಪಿಸ್ಟ್ ಆಗಿದ್ದ ಮೋಹನ್ ಬಳಿ 25.76 ಲಕ್ಷ ರೂ. ಪತ್ತೆಯಾಗಿತ್ತು. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣ ಎಸಿಬಿಗೆ ವರ್ಗಾವಣೆಯಾಗಿತ್ತು. ಪ್ರಕರಣದಲ್ಲಿ ಜಾಮೀನು ಕೋರಿ ಮೋಹನ್ ಸಲ್ಲಿಸಿದ್ದ ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಜ.18ರಂದು ವಜಾಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News