ಯುವಶಕ್ತಿ ಅಂಬೇಡ್ಕರ್ ಆಶಯಗಳನ್ನು ಉಳಿಸಬೇಕು: ಪ್ರಕಾಶ್ ರೈ

Update: 2019-02-20 15:20 GMT

ಬೆಂಗಳೂರು, ಫೆ.20: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಸಿದ್ಧಾಂತ ಹಾಗೂ ಆಶಯಗಳನ್ನು ಉಳಿಸಬೇಕಾದ ಆದ್ಯ ಕರ್ತವ್ಯ ಯುವಶಕ್ತಿಯ ಮುಂದಿದೆ ಎಂದು ನಟ ಪ್ರಕಾಶ್ ರೈ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ರಾಜ್ಯ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಆಯೋಜಿಸಿದ್ದ ಶೋಷಿತ ಬಹುಜನರ ಐಕ್ಯತಾ ರ‍್ಯಾಲಿಯನ್ನು ಉದ್ಘಾಟಿಸಿ ಮಾತನಾಡಿ ಅವರು, ದೇಶದ ಜನತೆಗಾಗಿ ಸಂವಿಧಾನವನ್ನು ಉಳಿಸಿ, ಜಾತಿವಾದ, ಕೋಮುವಾದವನ್ನು ಬುಡ ಸಮೇತ ಕಿತ್ತು ಹಾಕಬೇಕಾಗಿದೆ. ಅಲ್ಲದೆ, ದೇಶದ ಎಲ್ಲರಿಗೂ ದನಿಯಾಗಿರುವ ಸಂವಿಧಾನವನ್ನು ಹಾಗೂ ಅಂಬೇಡ್ಕರ್ ಆಶಯಗಳನ್ನು ಉಳಿಸಬೇಕಾದ ತುರ್ತು ಇದೆ ಎಂದು ತಿಳಿಸಿದರು.

ನಾನು ಪ್ರಜೆಗಳ ಪ್ರತಿನಿಧಿಯಾಗಿ, ಜನರ ಆಶಯಗಳೊಂದಿಗೆ ಒಗ್ಗೂಡಿ ಸಂಸತ್ತಿನಲ್ಲಿ ಅವರ ದನಿಯಾಗಲು ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಸುಳ್ಳು, ಮೋಸ ಮಾಡುವವರನ್ನು ನಂಬಬೇಡಿ, ಜನಪರವಾಗಿರುವವರನ್ನು ನಂಬಿ, ದೇಶದ ಎಲ್ಲ ಜನರಿಗೂ ಸಮಾನತೆ ಸಿಗುವಂತಾಗಬೇಕು ಎಂದು ಹೇಳಿದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಡಾ.ಆರ್. ಮೋಹನ್ ರಾಜ್ ಮಾತನಾಡಿ, ದೇಶದಲ್ಲಿನ ಶೋಷಿತ ಜನತೆ ಶಿಕ್ಷಿತರಾಗಬೇಕು ಹಾಗೂ ಅಧಿಕಾರದ ಕಡೆ ಸಾಗಬೇಕು. ಹೀಗಾಗಿ, ದೇಶದಲ್ಲಿ ಪರ್ಯಾಯ ರಾಜಕೀಯದ ದನಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೋಲಾರ, ಬಾಗಲಕೋಟೆ, ರಾಯಚೂರು ಹಾಗೂ ಮೈಸೂರಿನಲ್ಲಿ ಶೋಷಿತ ಬಹುಜನರ ಐಕ್ಯತಾ ರ‍್ಯಾಲಿಯನ್ನು ಆಯೋಜಿಸುವ ಮೂಲಕ ಶೋಷಿತರನ್ನು ಜಾಗೃತರನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಬರಹಗಾರ್ತಿ ಕೆ.ಷರೀಪಾ, ಪಕ್ಷದ ಕಾರ್ಯದರ್ಶಿ ಬಸವರಾಜ್ ಕೌತಾಳ್ ಹಾಗೂ ದಲಿತ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಮನೋಹರ್ ಚಂದ್ರಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘ ಪರಿವಾರದವರು ಸುಳ್ಳು ಹೇಳುತ್ತಿದ್ದಾರೆ. ನಾನು ಸತ್ಯ ಹೇಳುತ್ತಿದ್ದೇನೆ. ಸತ್ಯ ಹೇಳಿ ಯಾರಿಗೂ ಹೆದರಬೇಕಾಗಿಲ್ಲ. ನನ್ನ ದನಿಯನ್ನು ಯಾರಿಂದಲೂ ಅಡಗಿಸೋದಕ್ಕೆ ಸಾಧ್ಯವಿಲ್ಲ.

-ಪ್ರಕಾಶ್ ರೈ, ನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News