ಸರಕಾರಿ ಶಾಲೆಗಳ ಅಭಿವೃದ್ದಿಗೆ ಕ್ರಮ: ಶಾಸಕ ಎಸ್.ಟಿ.ಸೋಮಶೇಖರ್

Update: 2019-02-20 15:31 GMT

ಬೆಂಗಳೂರು, ಫೆ.20: ಬಡ ಮತ್ತು ಸಾಮಾನ್ಯ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳ ಅಭಿವೃದ್ದಿಗೆ ಶಾಸಕರ ಅನುದಾನ ದಿಂದ ಸಂಪೂರ್ಣ ಬಳಕೆ ಮಾಡಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಇಂದಿಲ್ಲಿ ಹೇಳಿದರು.

ನಗರದ ಉಳ್ಳಾಲು ವಾರ್ಡ್ ನ ದೊಡ್ಡಗೊಲ್ಲರಹಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಿರ್ಮಿಸಿರುವ 16 ಕೊಠಡಿ, ಬಯಲು ರಂಗಮಂದಿರ ಲೋಕಾರ್ಪಣೆ, ಶಿವನಪಾಳ್ಯ ಆಶಾಕಿರಣ ಬಡಾವಣೆಯಲ್ಲಿ ಒಳಚರಂಡಿ, ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾನೂ ಸಹ ಪ್ರಾಥಮಿಕ ಹಂತದಿಂದ ಬಿಎಸ್ಸಿ ವರೆಗೆ ಸರಕಾರಿ ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವುದರಿಂದ ಕಷ್ಟ, ನೋವು ಅರಿತಿದ್ದೇನೆ. ಸರಕಾರಿ ಶಾಲೆಗಳ ಅಭಿವೃದ್ಧಿಯೇ ನನ್ನ ಪ್ರಮುಖ ಕಾರ್ಯವಾಗಿದ್ದು, ಈ ವರ್ಷ ಉಚಿತವಾಗಿ 6 ಲಕ್ಷ ನೋಟ್ ಪುಸ್ತಕ, ಶಾಲಾ ಸಲಕರಣೆ ಒದಗಿಸಲಾಗುವುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಸಿ.ಬಸವರಾಜೇಗೌಡ ಮಾತನಾಡಿ, ಬೆಂಗಳೂರು ನಗರ ಎಲ್ಲ ಸರಕಾರಿ ಶಾಲೆಗಳ ಬಲವರ್ಧನೆಗೆ, ಗುಣಮಟ್ಟದ ಆದ್ಯತೆಗೆ ಶಾಸಕರು ಈಗಾಗಲೇ 10 ಕೋಟಿ ನೀಡಿದ್ದು ಇನ್ನು ಹೆಚ್ಚಿನ ಅನುದಾನಕ್ಕಾಗಿ ಕ್ರಿಯಾ ಯೋಜನಾ ಪಟ್ಟಿ ತಯಾರು ಮಾಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಜಲ ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಶೋಕ್, ಶಾಲೆಯ ಮುಖ್ಯ ಶಿಕ್ಷಕ ಬಿ.ಎಜ್.ವೆಂಕಟೇಶಯ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News