ಉಚಿತ ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 10ಕ್ಕೂ ಅಧಿಕ ಜೋಡಿ

Update: 2019-02-20 15:54 GMT

ಬೆಂಗಳೂರು, ಫೆ.20: ರಾಜಧಾನಿ ಬೆಂಗಳೂರಿನಂತಹ ನಗರದಲ್ಲಿ ಮದುವೆಗಳೆಂದರೆ ದುಬಾರಿ ವೆಚ್ಚ ಎನ್ನುವ ಮಾತುಗಳು ಸಾಮಾನ್ಯ. ಆದರೆ, ಸ್ವಂತ ವೆಚ್ಚದಲ್ಲಿ ಮಹಿಳೆಯರು ಒಗ್ಗೂಡಿ, ಆರ್ಥಿಕವಾಗಿ ಹಿಂದುಳಿದ ಮುಸ್ಲಿಮ್ ಸಮುದಾಯದ 10ಕ್ಕೂ ಅಧಿಕ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುವಂತೆ ಮಾಡಿದ್ದಲ್ಲದೆ, ಲಕ್ಷಾಂತರ ರೂಪಾಯಿ ಮೌಲ್ಯದ ಉಡುಗೊರೆ ನೀಡಿದ್ದಾರೆ.

ನಗರದ ಡೆಕ್ಕನ್ ಸನ್ ರಸ್ತೆಯ ಪ್ರೆಸ್ಟೀಜ್ ಮಸೀದಿಯ ಆವರಣದಲ್ಲಿ ಹ್ಯೂಮಾನಿ ಟೆಚ್ ಹೆಸರಿನ ಸ್ವಯಂ ಸೇವಾ ಸಂಘ ನೇತೃತ್ವದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಮುಸ್ಲಿಮ್ ಯುವಕ-ಯುವತಿಯರ ವಿವಾಹವನ್ನು ಧರ್ಮಾನುಸಾರ(ನಿಖಾ) ನೆರವೇರಿಸಲಾಯಿತು.

ಸಾಮೂಹಿಕ ವಿವಾಹವಾದ ದಂಪತಿಗಳಿಗೆ, ಮಂಚ, ಅಡುಗೆ ಪಾತ್ರೆಗಳು, ಪೆಟ್ಟಿಗೆ ಸೇರಿದಂತೆ ಲಕ್ಷಾಂತರ ರೂಪಾಯಿ ಉಡುಗೊರೆ ನೀಡಲಾಯಿತು. ಈ ಸಂಘಟನೆ 2012ರಿಂದ ಬಡವರ ಸಾಮೂಹಿಕ ವಿವಾಹ ನಡೆಸಿಕೊಂಡು ಬಂದಿದೆ. ವಿವಾಹದ ಖರ್ಚು ವೆಚ್ಚದ ಹೊರತಾಗಿ, ವಧುವಿಗೆ ಆಭರಣ, ಬಟ್ಟೆಗಳು ಹಾಗೂ ಅತಿಥಿಗಳಿಗೆ ಔತಣ ಒದಗಿಸಲಾಯಿತು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹ್ಯೂಮಾನಿ ಟೆಚ್ ಕಾರ್ಯದರ್ಶಿ ತಾಝೀಯುನ್ ಊಮರ್, ಆರ್ಥಿಕವಾಗಿ ಹಿಂದುಳಿದ ಮುಸ್ಲಿಮ್ ಮಹಿಳೆಯರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಲಾಗುತ್ತಿದೆ. ಇದುವರೆಗೂ 1,854 ಜೋಡಿಗಳ ಮದುವೆ ಮಾಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News