ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಲಿ: ಮಂಜಪ್ಪ ಕುಂಬಾರ

Update: 2019-02-20 17:21 GMT

ಬೆಂಗಳೂರು, ಫೆ.20: ಸಂತ ಕವಿ ಸರ್ವಜ್ಞನ ತ್ರಿಪದಿಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಇವರ ಆಶಯಗಳನ್ನು ಯುವ ತಲೆಮಾರಿಗೆ ತಲುಪಿಸುವ ಸದುದ್ದೇಶದಿಂದ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕಾದ ಅಗತ್ಯವಿದೆ ಎಂದು ಸರ್ವಜ್ಞ ಗುರುಪೀಠದ ಮಂಜಪ್ಪ ಕುಂಬಾರ ಶರಣರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕವಿ ಸರ್ವಜ್ಞ ಜನ್ಮಸ್ಥಳ ಹಾವೇರಿ ಜಿಲ್ಲೆಯ ಮಾಸೂರು ಗ್ರಾಮ ಎಂಬುದು ಖಚಿತವಾಗಿದೆ. ಆದರೂ ಕೆಲವರು ಈ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲವೆಂದು ತಿಳಿಸಿದರು.

ಪುರೋಹಿತಶಾಹಿಗಳ ಹಸ್ತಕ್ಷೇಪ: ತಳ ಸಮುದಾಯದ ಜ್ಞಾನಿಗಳು ಹಾಗೂ ಚಿಂತಕರನ್ನು ಪುರೋಹಿತಶಾಹಿಗಳು ಕಳಂಕಿತರನ್ನಾಗಿ ಬಿಂಬಿಸುತ್ತಿವೆ. ಪುರೋಹಿತಶಾಹಿಗಳು ತಮ್ಮ ಸಾಹಿತ್ಯದಲ್ಲಿ ಸರ್ವಜ್ಞನ ತಂದೆ ಬ್ರಾಹ್ಮಣ ಹಾಗೂ ತಾಯಿ ಕುಂಬಾರ ಸಮುದಾಯಕ್ಕೆ ಸೇರಿದವಳು ಎಂದು ದಾಖಲಿಸಿದ್ದಾರೆ. ಆದರೆ, ಈ ಬಗ್ಗೆ ಸಂಶೋಧನೆ ನಡೆಸಿದಾಗ ತಂದೆ, ತಾಯಿ ಇಬ್ಬರು ಕುಂಬಾರ ಸಮುದಾಯಕ್ಕೆ ಸೇರಿದವರೆ ಆಗಿರುವುದು ಖಚಿತವಾಗಿದೆ ಎಂದು ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಜಾನಕಿ ಮಾತನಾಡಿ, ಸಂತ ಕವಿ ಸರ್ವಜ್ಞ ಜನರ ಕವಿಯಾಗಿದ್ದಾನೆ. ತನ್ನ ಮೂರು ಸಾಲುಗಳ ಕವಿತೆಗಳ ಮೂಲಕ ಹುಟ್ಟಿನಿಂದ ಸಾವಿನವರೆಗಿನ ಬದುಕಿನ ಸಾರವನ್ನು ತೆರೆದಿಟ್ಟಿದ್ದಾನೆ. ಈ ತ್ರಿಪದಿಗಳನ್ನು ಯುವ ತಲೆಮಾರು ಓದುವಂತಾಗಬೇಕು ಎಂದು ತಿಳಿಸಿದರು.

ಕವಿ ಸರ್ವಜ್ಞ ತನ್ನ ತ್ರಿಪದಿಗಳನ್ನು ಕನ್ನಡದಲ್ಲಿ ಸರಳವಾಗಿ ಬರೆದಿರುವುದರಿಂದ ಜನಸಾಮಾನ್ಯರ ಬಾಯಲ್ಲಿ ಸಲೀಸಾಗಿ ನಲಿದಾಡುತ್ತಿವೆ. ಇವತ್ತಿನ ವರ್ತಮಾನಕ್ಕೆ ಸರ್ವಜ್ಞನ ತ್ರಿಪದಿಗಳು ಮರು ಓದಿಗೆ ಒಳಗಾಗಬೇಕಾದ ಅಗತ್ಯವಿದೆ ಎಂದು ಅವರು ಆಶಿಸಿದರು. ಕಾರ್ಯಕ್ರಮದಲ್ಲಿ ಕುಂಬಾರರ ಸಂಘದ ಅಧ್ಯಕ್ಷ ಕೆ.ಮುನಿಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News