ಚಾನೆಲ್ ಆಯ್ಕೆ ವಿಧಾನ ರದ್ದುಗೊಳಿಸುವಂತೆ ಐಕಾನ್ ನೆಟ್‌ವರ್ಕ್ ಆಗ್ರಹ

Update: 2019-02-20 17:25 GMT

ಬೆಂಗಳೂರು, ಫೆ.20: ಭಾರತೀಯ ದೂರ ಸಂಪರ್ಕ ನಿಯಂತ್ರಣಾ ಪ್ರಾಧಿಕಾರ ಜಾರಿಗೆ ತಂದಿರುವ ಗ್ರಾಹಕರು ತಮಗೆ ಬೇಕಾದ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ವಿಧಾನವನ್ನು ರದ್ದುಗೊಳಿಸುವಂತೆ ಐಕಾನ್ ನೆಟ್‌ವರ್ಕ್ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಕಾನ್ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಜಿ.ಕೃಷ್ಣಕುಮಾರ್, ಪ್ರಾಧಿಕಾರ ಜಾರಿಗೆ ತಂದಿರುವ ಹೊಸ ನಿಯಮ ಮೇಲ್ನೋಟಕ್ಕೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಚಾನೆಲ್ ವೀಕ್ಷಣೆಗೆ ಲಭ್ಯವಾಗುವಂತೆ ಭಾಸವಾಗುತ್ತದೆ. ಆದರೆ, ವಾಸ್ತವಾಗಿ ಆಯ್ಕೆಯ ಚಾನೆಲ್‌ಗಳನ್ನು ಪಡೆಯಲು ಕನಿಷ್ಠ ಸಾವಿರ ಮಾಸಿಕ ಶುಲ್ಕ ನೀಡಬೇಕಾಗುತ್ತದೆ ಎಂದು ಆರೋಪಿಸಿದರು.

ಕೇಂದ್ರ ಸರಕಾರ ಅವೈಜ್ಞಾನಿಕ ಮತ್ತು ಅವಾಸ್ತವ ನಿಯಮಗಳನ್ನು ಹೇರಿ ಕೇಬಲ್ ವೃತ್ತಿಯನ್ನು ಅವಲಂಬಿಸಿರುವ ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೇಂದ್ರ ವಾರ್ತಾ ಸಚಿವ ಮತ್ತು ಪ್ರಧಾನಮಂತ್ರಿ ಮಧ್ಯಪ್ರವೇಶಿಸಿ ಪ್ರಾಧಿಕಾರದ ಜನ ವಿರೋಧಿ ನಿಯಮಗಳನ್ನು ರದ್ದುಗೊಳಿಸಿ ಈ ಮುಂಚಿನ ಪದ್ದತಿಯಂತೆ ಕೇಬಲ್ ನೆಟ್‌ವರ್ಕ್ ಕಾರ್ಯನಿರ್ವಹಿಸುವಂತೆ ಮಾಡಬೇಕೆಂದು ಒತ್ತಾಯಿಸಿದರು.

ಪ್ರಾಧಿಕಾರ ನಿಯಮಗಳನ್ನು ಮುಂದುವರೆಸಿದಲ್ಲಿ ಲಕ್ಷಾಂತರ ಉದ್ಯೋಗಿಗಳು ವೃತ್ತಿಯನ್ನು ಕಳೆದುಕೊಂಡು ನಿರುದ್ಯೋಗಿಗಳಾಗುತ್ತಾರೆ. ಸರಕಾರ ನಿಯಮವನ್ನು ರದ್ದುಗೊಳಿಸದಿದ್ದರೆ ಪ್ರಾಧಿಕಾರದ ವಿರುದ್ದ ಗ್ರಾಹಕರು ಮತ್ತು ಕೇಬಲ್ ಆಪರೇಟರ್‌ಗಳು ವಿವಿಧ ಹಂತಗಳಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News