ಪರೀಕ್ಷಾ ಪರ್ವ: ನಿಮ್ಮ ಓದು ಕ್ರಮಬದ್ಧವಾಗಿರಲಿ

Update: 2019-02-20 18:30 GMT

ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಓದುವ ಮೂಲಕ ತಯಾರಾಗುತ್ತಾರೆ. ಮನೆಯಲ್ಲಿಯೂ, ಶಾಲಾ ಕಾಲೇಜಿನಲ್ಲಿಯೂ, ಈ ಅವಧಿಯಲ್ಲಿ ಕೇಳಿ ಬರುವ ಪದವೆಂದರೆ ಓದು ಎಂಬುದಾಗಿದೆ. ನಮ್ಮ ವಿದ್ಯಾರ್ಥಿಗಳು ಓದುತ್ತಾರೆ ಕೂಡಾ. ಆದರೆ ಅದು ಎಷ್ಟು ಪ್ರಯೋಜನಕ್ಕೆ ಬರುತ್ತಿದೆ ಎನ್ನುವುದು ಅವರ ಓದಿನ ಕ್ರಮವನ್ನು ಅವಲಂಬಿಸಿದೆ. ಓದಿನಲ್ಲಿ ಮೆಲ್ಲ ಓದು, ಮೌನ ಓದು, ಗಟ್ಟಿ ಓದು ಎಂಬ ವಿಧಗಳಿವೆ. ಕೆಲವರಿಗೆ ಜೋರಾಗಿ ಕೇಳಿಸುವ ಮೂಲಕ ಓದುವ ಅಭ್ಯಾಸ. ಕೆಲವರು ಮನಸ್ಸಿನ ಮೂಲಕವೇ ಮೌನವಾಗಿ ಓದುವ ರೂಢಿಯನ್ನು ಬೆಳೆಸಿಕೊಂಡಿರುತ್ತಾರೆ. ಇನ್ನೂ ಕೆಲವರು ಮೆಲ್ಲ ಮೆಲ್ಲನೆ ಹೆಚ್ಚು ಯಾರಿಗೂ ಕೇಳಿಸದಂತೆ ತಮಗೆ ಮಾತ್ರ ಕೇಳಿಸುವ ಹಾಗೆ ಓದುತ್ತಾರೆ. ಈ ಮೂರೂ ವಿಧಗಳ ಓದು ಕೂಡಾ ಸ್ವೀಕಾರ ಯೋಗ್ಯವೇ ಆಗಿವೆ. ಯಾವ ವಿದ್ಯಾರ್ಥಿ ಯಾವ ರೀತಿಯ ಓದನ್ನು ನೆಚ್ಚಿಕೊಂಡಿದ್ದಾನೆ, ಯಾವ ರೀತಿಯ ಓದಿನ ಮೂಲಕ ಅವನಿಗೆ ಹೆಚ್ಚು ನೆನಪಿನಲ್ಲಿಡಲು, ಅರ್ಥೈಸಲು ಸಾಧ್ಯವಾಗುತ್ತದೆಯೋ ಆ ಮಾದರಿಯನ್ನು ಮುಂದುವರಿಸುವುದು ಸೂಕ್ತ. ಇಲ್ಲಿ ಬದಲಾವಣೆ ಮಾಡಬೇಕಾದ ಒಂದು ಪ್ರಮುಖ ಅಂಶವೆಂದರೆ ಓದುವುದನ್ನು ಕ್ರಮಬದ್ಧತೆಯಿಂದ ಓದಬೇಕು.
 ಓರ್ವ ವಿದ್ಯಾರ್ಥಿ ನಿರಂತರ ಓದಿದರೆ ನಲವತ್ತರಿಂದ ಅರವತ್ತು ನಿಮಿಷದವರೆಗೆ ಸಾಮಾನ್ಯವಾಗಿ ಏಕಾಗ್ರತೆಯಿಂದ ಓದಬಹುದು. ಆ ಬಳಿಕ ವಿದ್ಯಾರ್ಥಿಯು ಒಂದು ಬಾರಿ ಓದಿದ್ದನ್ನು ಸ್ಮರಿಸಬೇಕು. ಉದಾಹರಣೆಗೆ ಒಂದು ಪ್ರಶ್ನೆ ಮತ್ತು ಅದರ ಉತ್ತರವನ್ನು ಓದಿ ಅರ್ಥೈಸಿಕೊಂಡ ಮೇಲೆ ಆ ಉತ್ತರವನ್ನು ಸ್ಮರಿಸ (್ಕಛ್ಚಿಚ್ಝ್ಝ) ಬೇಕು. ಬಳಿಕವೇ ಮುಂದಿನ ಪ್ರಶ್ನೆಗೆ ಹೋಗಬೇಕು. ಈ ರೀತಿ ನಲವತ್ತರಿಂದ ಅರವತ್ತು ನಿಮಿಷದವರೆಗೆ ಓದಿದ ಬಳಿಕ ಅಷ್ಟರವರೆಗೆ ಓದಿದ್ದನ್ನು ಒಂದು ಬಾರಿ ಸ್ಮರಿಸಿಕೊಳ್ಳಬೇಕು. ಯಾವುದೇ ಈ ಹಂತದಲ್ಲಿ ಸ್ಮರಣೆಗೆ ಬರುವುದಿಲ್ಲವೋ ಅದನ್ನು ಮತ್ತೊಂದು ಬಾರಿ ಓದಬೇಕು. ಈ ಮೊದಲ ಹಂತದ ಓದು ಮುಗಿದ ಬಳಿಕ ಒಂದರಿಂದ ಐದು ನಿಮಿಷದ ವಿರಾಮ ತೆಗೆದುಕೊಳ್ಳಬೇಕು. ಕುಳಿತು ಓದುವವರಾದರೆ ನಿಂತು ನಡೆಯಬೇಕು. ನಿಂತು ಚಲನೆಯ ಮೂಲಕ ಓದಿದವರಾದರೆ ಕುಳಿತು ವಿರಾಮ ಪಡೆಯಬೇಕು, ನೀರು ಕುಡಿಯಬೇಕು, ನಿದ್ರೆ ಬರುವಂತಿದ್ದರೆ ಮುಖ ತೊಳೆಯಬೇಕು. ಈ ರೀತಿ ಐದು ನಿಮಿಷದ ವಿರಾಮದ ಬಳಿಕ ಪುನಃ ಮೊದಲು ಹೇಳಿದ ಕ್ರಮದಂತೆ ಓದನ್ನು ಮುಂದುವರಿಸಬೇಕು. ದೀರ್ಘ ಉತ್ತರದ ಪ್ರಶ್ನೆ, ಕಠಿಣ ಪ್ರಶ್ನೆಗಳಿದ್ದರೆ ಈ ಹಂತದಲ್ಲಿ ಒಂದು ಪುಸ್ತಕದಲ್ಲಿ ಪ್ರಮುಖ ಅಂಶಗಳನ್ನು ಟಿಪ್ಪಣಿ ಮಾಡುತ್ತಾ ಹೋದಲ್ಲಿ ಮತ್ತು ಸ್ಮರಣೆಯ ಹಂತದಲ್ಲಿ ಆ ಟಿಪ್ಪಣಿಯನ್ನು ಸ್ಮರಿಸಲು ಬಳಸಿಕೊಂಡಲ್ಲಿ ನಿಮ್ಮ ಓದು ಕ್ರಮಬದ್ಧವಾಗುವುದು, ಹೆಚ್ಚು ಪರಿಣಾಮಕಾರಿವಾಗುತ್ತದೆ. ಹೆಚ್ಚು ಸಮಯ ನೆನಪಿನಲ್ಲಿಡಲು ಕೂಡಾ ಇದರಿಂದ ಸಾಧ್ಯವಾಗುತ್ತದೆ.

Writer - -ಎ.ಆರ್.ಅನಂತಾಡಿ

contributor

Editor - -ಎ.ಆರ್.ಅನಂತಾಡಿ

contributor

Similar News