ಪಾರ್ಶ್ವವಾಯು ಅಪಾಯದಿಂದ ದೂರವಿರಬೇಕೇ?: ಈ 6 ಆಹಾರಗಳನ್ನು ಸೇವಿಸಿ...

Update: 2019-02-21 11:59 GMT

ಪ್ರತಿವರ್ಷ ಒಂದೂವರೆ ಲಕ್ಷ ಜನರು ಪಾರ್ಶ್ವವಾಯುವಿನಿಂದ ಸಾವನ್ನಪ್ಪುತ್ತಿದ್ದಾರೆ ಎನ್ನುವುದು ನಿಮಗೆ ಗೊತ್ತೇ?, ನಾವು ಸೇವಿಸುವ ಆಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಆರೋಗ್ಯಕರ ಆಹಾರ ಸೇವನೆಯು ಪಾರ್ಶ್ವವಾಯುವಿನ ಅಪಾಯವನ್ನೂ ಕಡಿಮೆ ಮಾಡಬಲ್ಲುದು. ಪಾರ್ಶ್ವವಾಯುವಿಗೆ ಕಾರಣಗಳಲ್ಲಿ ಅಧಿಕ ರಕ್ತದೊತ್ತಡ, ಧೂಮ್ರಪಾನ, ಮಧುಮೇಹ ಮತ್ತು ಸತ್ವಹೀನ ಆಹಾರ ಸೇವನೆ ಇತ್ಯಾದಿಗಳು ಸೇರಿವೆ. ಆರೋಗ್ಯಕರ ಆಹಾರ ಸೇವನೆಯು ನಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಪಾರ್ಶ್ವವಾಯುವಿನ ಅಪಾಯವನ್ನು ತಗ್ಗಿಸುವ ಕೆಲವು ಆಹಾರಗಳ ಕುರಿತು ಮಾಹಿತಿಯಿಲ್ಲಿದೆ.......

►ಮೀನು

ಮೀನಿನಲ್ಲಿರುವ ಒಮೆಗಾ-3 ಫ್ಯಾಟಿ ಆ್ಯಸಿಡ್ ‌ಗಳು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ನಿಯಂತ್ರಣದಲ್ಲಿಡುತ್ತವೆ ಮತ್ತು ಇದು ಪಾರ್ಶ್ವವಾಯುವಿನ ಅಪಾಯವನ್ನು ತಗ್ಗಿಸುತ್ತದೆ. ಸಾಲ್ಮನ್, ಟುನಾ ಮತ್ತು ಬಂಗುಡೆಯಂತಹ ಮೀನುಗಳಲ್ಲಿ ಸಮೃದ್ಧವಾಗಿರುವ ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳು ಆರೋಗ್ಯಕರ ಕೊಬ್ಬು ಆಗಿವೆ ಮತ್ತು ಹೃದ್ರೋಗಗಳನ್ನು ದೂರವಿರಿಸುವಲ್ಲಿ ನೆರವಾಗುತ್ತವೆ.

►ಇಡಿಯ ಧಾನ್ಯಗಳು

ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‌ನಲ್ಲಿ ಇತ್ತೀಚಿಗೆ ಪ್ರಕಟಗೊಂಡಿರುವ ಅಧ್ಯಯನ ವರದಿಯಂತೆ ಇಡಿಯ ಧಾನ್ಯಗಳು ಪಾರ್ಶ್ವವಾಯುವಿನ ಅಪಾಯವನ್ನು ತಗ್ಗಿಸುತ್ತವೆ. ಇಡಿಯ ಧಾನ್ಯಗಳಲ್ಲಿ ನಾರು, ವಿಟಾಮಿನ್ ಬಿ,ಫಾಲೇಟ್, ಮ್ಯಾಗ್ನೀಷಿಯಂ ಮತ್ತು ಕಬ್ಬಿಣ ಸಮೃದ್ಧ ಪ್ರಮಾಣದಲ್ಲಿದ್ದು,ಇವು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತವೆ ಮತ್ತು ಪಾರ್ಶ್ವವಾಯುವನ್ನು ತಡೆಯಲು ನೆರವಾಗುತ್ತವೆ.

►ಓಟ್‌ಮೀಲ್

ಓಟ್‌ಮೀಲ್ ಅಥವಾ ತೋಕೆಗೋಧಿಯ ಆಹಾರವನ್ನು ನಮ್ಮ ಊಟದಲ್ಲಿ ಸೇರಿಸಿಕೊಳ್ಳುವ ಮೂಲಕ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವನ್ನು ತಗ್ಗಿಸಬಹುದು. ಶರೀರದಲ್ಲಿಯ ಕೆಟ್ಟ ಕೊಲೆಸ್ಟ್ರಾಲ್‌ನ ಅಧಿಕ ಮಟ್ಟವು ಮಿದುಳಿನ ಸುತ್ತಲಿನ ರಕ್ತನಾಳಗಳಲ್ಲಿ ಪಾಚಿ ಸಂಗ್ರಹವಾಗಲು ಕಾರಣವಾಗುತ್ತದೆ ಮತ್ತು ಇದು ಪಾರ್ಶ್ವವಾಯುವನ್ನುಂಟು ಮಾಡುತ್ತದೆ. ಪಾರ್ಶ್ವವಾಯುವಿನಿಂದ ದೂರವಿರಲು ನಿಯಮಿತವಾಗಿ ಮೂರು ಕಪ್‌ಗಳಷ್ಟು ಓಟ್‌ಮೀಲ್ ಸೇವನೆಯನ್ನು ತಜ್ಞರು ಶಿಫಾರಸು ಮಾಡುತ್ತಾರೆ.

►ಸಿಹಿಗೆಣಸು

ಸಿಹಿಗೆಣಸಿನಲ್ಲಿ ಅಧಿಕ ಪ್ರಮಾಣದಲ್ಲಿರುವ ನಾರು ಮತ್ತು ಪೊಟ್ಯಾಷಿಯಂ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುವ ಮೂಲಕ ಪಾರ್ಶ್ವವಾಯುವಿನ ಅಪಾಯವನ್ನು ತಗ್ಗಿಸುತ್ತವೆ. ಅದರಲ್ಲಿ ಸಮೃದ್ಧವಾಗಿರುವ ಉತ್ಕರ್ಷಣ ನಿರೋಧಕಗಳು ರಕ್ತನಾಳದಲ್ಲಿ ಪಾಚಿ ಸಂಗ್ರಹವಾಗುವುದನ್ನು ತಡೆಯುತ್ತವೆ.

►ಪೊಟ್ಯಾಷಿಯಂ ಸಮೃದ್ಧ ಆಹಾರಗಳು

ಪೊಟ್ಯಾಷಿಯಂ ಸಮೃದ್ಧ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡಬಹುದು ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಹಸಿರು ಸೊಪ್ಪುಗಳು, ಸಿಹಿಗೆಣಸು, ಬಟಾಣಿ, ಅಣಬೆ, ಬದನೆಕಾಯಿ ಮತ್ತು ಕುಂಬಳಕಾಯಿ ಇವು ಪೊಟ್ಯಾಷಿಯಂ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುವ ಕೆಲವು ಆಹಾರಗಳಾಗಿವೆ.

►ಕಡಿಮೆ ಕೊಬ್ಬಿನ ಡೇರಿ ಉತ್ಪನ್ನಗಳು

ಹಾಲು,ಚೀಸ್‌ನಂತಹ ಡೇರಿ ಉತ್ಪನ್ನಗಳು ಪ್ರೋಟಿನ್,ಕ್ಯಾಲ್ಸಿಯಂ,ಪೊಟ್ಯಾಷಿಯಂ ಮತ್ತು ವಿಟಾಮಿನ್ ಡಿ ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುತ್ತವೆ ಮತ್ತು ಇವೆಲ್ಲ ಅತ್ಯುತ್ತಮ ಆರೋಗ್ಯ ಲಾಭಗಳನ್ನು ನೀಡುತ್ತವೆ. ಆದರೆ ಪೂರ್ಣ ಪ್ರಮಾಣದ ಕೊಬ್ಬು ಇರುವ ಡೇರಿ ಉತ್ಪನ್ನಗಳಲ್ಲಿ ಸ್ಯಾಚ್ಯುರೇಟೆಡ್ ಫ್ಯಾಟ್ ಅಧಿಕ ಪ್ರಮಾಣದಲ್ಲಿರುತ್ತದೆ ಮತ್ತು ಇದು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಕಾರಣವಾಗುವ ಮೂಲಕ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಪಾರ್ಶ್ವವಾಯುವಿಗೆ ಕಾರಣವಾಗುವ ಹೃದ್ರೋಗ,ಟೈಪ್-2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಅಪಾಯವನ್ನು ತಗ್ಗಿಸಲು ನಿಮ್ಮ ಆಹಾರದಲ್ಲಿ ಕಡಿಮೆ ಕೊಬ್ಬು ಇರುವ ಡೇರಿ ಉತ್ಪನ್ನಗಳಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News